ವಿಶ್ವಕರ್ಮ ಸಮಾಜವು ಜಗತ್ತಿಗೆ ಅನನ್ಯ ಕೊಡುಗೆ : ಧನಪಾಲಶೆಟ್ಟಿ
ಇಂಡಿ : ವಿಶ್ವಕರ್ಮ ಸಮಾಜವು ಜಗತ್ತಿಗೆ ಅನನ್ಯ ಕೊಡುಗೆ ನೀಡಿದ ಸಮಾಜ. ದೇಶದ ಬೆನ್ನೆಲುಬಾಗಿರುವ ರೈತರಿಗೆ ಕೃಷಿಕ ಪೂರಕವಾದ ಸಾಮಾಗ್ರಿಗಳನ್ನು ಒದಗಿಸುವ ವಿಶ್ವಕರ್ಮ ಸಮಾಜ ರೈತರ ಬೆನ್ನೆಲುಬು ಆಗಿದ್ದಾರೆ ಎಂದು ಗ್ರೇಡ್ – 2 ತಹಶಿಲ್ದಾರ ಧನಪಾಲಶೆಟ್ಟಿ ದೇವೂರ ಹೇಳಿದರು.
ಮಂಗಳವಾರ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಆಯೋಜಿಸಿರುವ ವಿಶ್ವಕರ್ಮ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚಾಣೆ ಮಾಡಿ ಮಾತನಾಡಿದರು.
ವಿಶ್ವಕರ್ಮ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ರಮೇಶ್ ಪೊದ್ದಾರ ಮಾತಾನಾಡಿದ ಅವರು, ಬ್ರಹ್ಮಾಂಡದ ಮೊದಲ ವಾಸ್ತುಶಿಲ್ಪಿ ವಿಶ್ವಕರ್ಮರ ಹಿನ್ನೆಲೆ, ಕಾರ್ಯವೈಖರಿ, ದೇವಾನುದೇವತೆಗಳನ್ನು ಮೂರ್ತರೂಪಕ್ಕೆ ತಂದದ್ದನ್ನು ಹಾಗೂ ಈಶ್ವರನಿಗೆ ತ್ರಿಶೂಲ, ಶ್ರೀಕೃಷ್ಣ ಪರಮಾತ್ಮನಿಗೆ ದ್ವಾರಕಾ ನಗರ, ರಾವಣನಿಗೆ ಅರಮನೆ, ಪಾಂಡವರಿಗೆ ಅರಮನೆಯಾಗಿದ್ದ ಇಂದ್ರ ಸ್ಥವನ್ನು, ಕಾರ್ತಿಕೇಯನಿಗೆ ಭರ್ಜಿಯನ್ನು ನಿರ್ಮಿಸಿಕೊಟ್ಟ ಬಗೆಯನ್ನು ಸವಿವರವಾಗಿ ತಿಳಿಸಿಕೊಟ್ಟರು.
ಇನ್ನೂ ಪಂಚಕುಲಕಸುಬಗಳನ್ನು ನಿರ್ವಹಿಸಲು ಯುವ ಸಮಾಜ ಮುಂದೆ ಬರುತ್ತಿಲ್ಲ. ಇದರಿಂದಾಗಿ ಕೃಷಿ ಚಟುವಟಿಕೆಗಳನ್ನು ಹಿನ್ನಡೆಯಾಗುತ್ತಿದೆ. ಉತ್ತಮ ಶಿಕ್ಷಣ ದೊರೆಯುತ್ತಿದ್ದರೆ ಕುಲಕಸುಬುಗಳು ಇಂದಿಗೂ ಉಳಿಯುತ್ತಿತ್ತು. ಕುಲ ಕಸುಬು ನಶಿಸಿದರೆ ಸಮಾಜಕ್ಕೆ ದೊಡ್ಡ ನಷ್ಟ ಉಂಟಾಗಲಿದ್ದು, ಕುಲ ಕಸುಬುಗಳಿಗೆ ಪೂರಕವಾದ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕು. ಕುಶಲ ಕರ್ಮಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕು. ಸರಕಾರದ ಯೋಜನೆಗಳನ್ನು ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಿ ನೇರವಾಗಿ ತಳಮಟ್ಟದ ಫಲಾನುಭವಿಗಳಿಗೆ ತಲುಪಿಸಬೇಕು. ವಿಶ್ವಕರ್ಮ ಸಮಾಜವನ್ನು ವಿಶ್ವಾಸಕ್ಕೆ ಪಡೆದುಕೊಂಡು ಯೋಜನೆಗಳನ್ನು ರೂಪಿಸಬೇಕು. ಯಂತ್ರೋಪಕರಣಗಳ ಖರೀದಿಗೆ ಸಹಕಾರ ನೀಡಬೇಕು. ಇದಕ್ಕಾಗಿ ಕಾರ್ಯಾಗಾರಗಳನ್ನು ನಡೆಸಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮೇಶ್ ಲಮಾಣಿ, ಶಿರಸ್ತೆದಾರ ಬಿ.ಎ ರಾವೂರ ಹಾಗೂ ವಿಶ್ವಕರ್ಮ ಮಹಾಸಭಾ ಘಟಕ ಕಾರ್ಯದರ್ಶಿ ಸುಜೀತಕುಮಾರ ಮೋಹನ ಲಾಳಸಂಗಿ, ರಾಜು ಬಡಿಗೇರ, ಚಂದ್ರಕಾಂತ ಬಡಿಗೇರ, ವಿಶ್ವನಾಥ ಬಡಿಗೇರ, ಗಂಗಾಧರ ಬಡಿಗೇರ, ನಾಗು ಪೊದ್ದಾರ, ಚಂದ್ರಕಾಂತ ಸುತಾರ ಹಾಗೂ ಅನೇಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.