ಜಗದ ಮೊದಲ ಶಿಲ್ಪಿ ವಿರಾಟ್ ವಿಶ್ವಕರ್ಮ; ಶಾಸಕ ಎಂಆರ್ ಮಂಜುನಾಥ್
ಹನೂರು: ಸಮಾಜದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ವೃತ್ತಿಯನ್ನು ಅಭಿವೃದ್ಧಿ ಹೊಂದಬೇಕು ಇದಕ್ಕಾಗಿ ನನ್ನ ಸಂಪೂರ್ಣ ಸಹಕಾರವನ್ನು ನೀಡುತ್ತೇನೆ ಎಂದು ಶಾಸಕ ಎಂ ಆರ್ ಮಂಜುನಾಥ್ ರವರು ಭರವಸೆಯನ್ನು ನೀಡಿದರು. ಹನೂರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲೂಕು ವಿಶ್ವಕರ್ಮ ಸಮುದಾಯ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಪಂಚದಲ್ಲಿ ಬೇರೆ ರಾಷ್ಟ್ರಗಳ ಶೈಲಿಯೇ ಒಂದು ರೀತಿ ಇದೆ, ಭಾರತದ ಶೈಲಿಯೇ ಒಂದು ರೀತಿ ಇದೆ ನಮ್ಮ ದೇಶದ ಆಚಾರ ವಿಚಾರ ಸಂಸ್ಕೃತಿ ಬೇರೆ ಬೇರೆ ಇದೆ. ಕಲೆಯ ಮೂಲ ಕರ್ತೃವೇ ವಿಶ್ವಕರ್ಮ ಜನಾಂಗದವರಾಗಿದ್ದಾರೆ. ನಮ್ಮ ದೇವಾಲಯಗಳ ವೈಶಿಷ್ಟ್ಯತೆಗೆ ವಿಶ್ವಕರ್ಮ ಕಲೇಯೇ ಮುಖ್ಯ ಕಾರಣವಾಗಿದೆ. ನಿಮ್ಮ ಕರಕುಶಲದಿಂದಲೇ ಜನಸಾಮಾನ್ಯರು ಚಿನ್ನ ಬೆಳ್ಳಿಯನ್ನು ಉಪಯೋಗಿಸಲು ಸಾಧ್ಯವಾಗಿದೆ. ಹನೂರು ತಾಲೂಕಿನ ಬಹಳ ಹಿಂದುಳಿದ ಸಮಾಜದ ಜನಾಂಗದವರು ಇದ್ದಾರೆ. ವಿಶ್ವಕರ್ಮ ಜನಾಂಗದವರು ತಮ್ಮ ಕುಶಲಕರ್ಮಿಗಳಿಂದಾಗಿ ತಮ್ಮ ವೃತ್ತಿಯನ್ನು ಹೊಂದಿದ್ದರೆ. ನಿಮ್ಮ ಪರವಾಗಿ ನಾನು ಸದಾ ನಿಮ್ಮ ಜೊತೆ ಇರುತ್ತೇನೆ. ನಿಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುತ್ತೇನೆ. ವಿಶ್ವಕರ್ಮರ 108 ಅಡಿಯ ಶಿಲೆಯನ್ನು ಮಾಡಲು ಕೆಪಿ ನಂಜುಂಡಿ ಅವರು ಮುಂದಾಗಿದ್ದಾರೆ ಅವರಿಗೆ ಶುಭವಾಗಲಿ ಎಂದು ಹಾರೈಸಿದರು.
ವಿಶ್ವಕರ್ಮ ರಾಜ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯರಾದ ಕೆಪಿ ನಂಜುಂಡಿ ರವರು ಮಾತನಾಡಿ ವಿಶ್ವಕರ್ಮ ಅನ್ನುವುದು ಜಾತಿಯಲ್ಲ ಅದೊಂದು ಸಂಸ್ಕೃತಿಯಾಗಿದೆ. ದೇಶದಲ್ಲಿ 10 ಕೋಟಿ ಗಿಂತ ಹೆಚ್ಚು ಜನಸಂಖ್ಯೆ ಹೊಂದಿದ್ದು, 4ಜನ ಸಂಸದರು, 3 ರಾಜ್ಯಸಭಾ ಸದಸ್ಯರು, 12 ಮಂದಿ ಶಾಸಕರು ಇವೆಲ್ಲವೂ ಮೀಸಲಾತಿಯ ಮೂಲಕ ಆಯ್ಕೆಯಾಗಿದ್ದೇವೆ. ದೇವತೆಗಳ ದೇವತೆ ವಿಶ್ವಕರ್ಮ ಎಂದರೆ ತಪ್ಪಾಗಲಾರದು ಎಂದು ತಿಳಿಸಿದ್ದರು.
ವಿಶ್ವಕರ್ಮ ಜಯಂತಿಯನ್ನು ಮಾಡುವುದಕ್ಕೆ ಸತತ ಎಂಟು ವರ್ಷಗಳ ಹೋರಾಟವನ್ನು ಮಾಡಿ ನಂತರ ಸರ್ಕಾರ ಜಯಂತಿಯನ್ನು ಆಚರಿಸಲು ಅನುಮೋದನೆಯನ್ನು ನೀಡಿತು. ಈ ದೇಶಕ್ಕೆ ಗುಡಿ ಗೋಪುರಗಳನ್ನು ಮಾಡಿಕೊಟ್ಟಿದ್ದೇವೆ. ನಮ್ಮ ಮೂಲ ಒಂದೇ ನಮ್ಮ ಸಮಾಜದವರನ್ನು ಪುರೋಹಿತರನ್ನಾಗಿ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದರು. ದೇವರ ಮೂರ್ತಿಯನ್ನು ಮಾಡುವುದು ನಾವು ಆದರೆ ನಮ್ಮನ್ನೇ ಗರ್ಭಗುಡಿಗೆ ಬಿಡುವುದಿಲ್ಲ ಆದ್ದರಿಂದ ನೀವು ಹೋರಾಟ ಮಾಡಿದಾಗಲೇ ನಿಮಗೆ ಶಕ್ತಿ ಬರುತ್ತದೆ. ನಮ್ಮ ಜನಾಂಗದವರಿಗಾಗಿ ಒಂದು ಸಮುದಾಯ ಭವನವನ್ನು ನಿರ್ಮಿಸುವುದು ನನ್ನ ಜವಾಬ್ದಾರಿ ಎಂದು ತಿಳಿಸಿದರು.
ವಿಜೃಂಭಣೆಯಿಂದ ಜರುಗಿದ ಮೆರವಣಿಗೆ
ಕಾರ್ಯಕ್ರಮ ಆರಂಭಕ್ಕೂ ಮುನ್ನ ಪಟ್ಟಣದ ಆರ್ ಎಂ ಸಿ ಆವರಣದಿಂದ ಹಲವು ಕಲಾತಂಡಗಳ, ವಾದ್ಯಮೇಳಗಳು, ಮಹಿಳೆಯರು ಕಳಸಗಳನ್ನು ಹೊತ್ತು ಹಾಗೂ ಅಶ್ವರಥದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಸಮುದಾಯದ ಮುಖಂಡರುಗಳು ಪುಷ್ಪ ನಮನ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆಯನ್ನು ನೀಡಿದರು. ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಹೊರಟು, ಸಮುದಾಯದ ಜನರು ನೃತ್ಯ ಮಾಡುವುದರ ಮುಖಾಂತರ ವಿಶ್ವಕರ್ಮ ಜಯಂತಿಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಗುರುಪ್ರಸಾದ್, ಇಒ ಉಮೇಶ್, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಮೂರ್ತಿ, ವಿಶ್ವಕರ್ಮ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಸೌಭಾಗ್ಯ, ಅಖಿಲ ಭಾರತ ವಿಶ್ವಕರ್ಮದ ಕಾರ್ಯದರ್ಶಿ ಲೋಹಿತ್ ಕಲ್ಲೂರು, ಪಟ್ಟಣ ಪಂಚಾಯತಿ ಸದಸ್ಯರಾದ ಹರೀಶ್, ಗಿರೀಶ್, ಮಹೇಶ್, ಮಹೇಶ್ ನಾಯಕ, ಮುಖಂಡರುಗಳಾದ ಮಂಜೇಶ್, ಗುರುಮಲ್ಲಪ್ಪ, ಪ್ರಸನ್ನ, ವಿಜಯಕುಮಾರ್, ಮುತ್ತುರಾಜು, ಡಾಕ್ಟರ್ ನಾಗಲಿಂಗಪ್ಪ, ರಮೇಶ್, ನಾಗಣ್ಣ ಇನ್ನು ಮುಂತಾದವರು ಹಾಜರಿದ್ದರು.