ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದ ನಡು ಭಾಗದಲ್ಲಿ ಹಾದು ಹೋದ ರೇಲ್ವೆ ಮಾರ್ಗಕ್ಕೆ ಅಪಘಾತ ತಡೆಯಲು ಅಳವಡಿಸಲಾದ ರೇಲ್ವೆ ಗೇಟ್ ಫಾಟಕ್ ಮೂಲಕ ವಾಹನ ಸವಾರರು ಸಂಚರಿಸುವದು ಈ ಭಾಗದ ಜನರಿಗೆ ಈಗ ಸವಾಲಾಗಿ ಪರಿಣಮಿಸಿದೆ. ಬಹುದಿನಗಳಿಂದ ಅಂಕುಡೊಂಕದ ಫಾಟಕ್ ಬೇಗನೇ ದುರಸ್ತಿಗೊಳಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇಲ್ಲಿನ ಪ್ರಸಿದ್ಧ ಪವಾಡ ಪುರುಷ ಶ್ರೀ ಸಿದ್ಧಲಿಂಗ ಮಹಾರಾಜರ ಕಮರಿಮಠದ ಸಮೀಪದಲ್ಲೆ, ಗ್ರಾಮಕ್ಕೆ ಹೊಂದಿಕೊಂಡಿರುವ ಹಳೆಯ ಕಾಲದ ಈ ರೇಲ್ವೆ ಗೇಟ್‌ನಿಂದ ಈ ಹಿಂದೆ ಕಿರಿ ಕಿರಿಯಾಗಲಿ, ತೊಂದರೆ ಆಗಲಿ ಆಗಿರಲಿಲ್ಲ. ರೈಲುಗಳ ಓಡಾಟವೂ ಕಡಿಮೆ ಇತ್ತು. ಹೆಚ್ಚಿದ ವಾಹನಗಳ ಸಂಖ್ಯೆ ಯಿಂದಾಗಿ ಈ ರೇಲ್ವೆ ಕ್ರಾಸ್ ಮೂಲಕ ಈಗ ನಿತ್ಯ ನೂರಾರು ವಾಹನಗಳು, ಸಾವಿರಾರು ಜನರು ಸಂಚರಿಸುತ್ತಾರೆ. ಗ್ರಾಮದ ಜನರು, ಸಮೀಪದ ಲೋಣಿ. ಕೆ.ಡಿ, ಬರಗೂಡಿ ಗ್ರಾಮಸ್ಥರು ಇದೇ ಗೇಟ್ ದಾಟಿ ಸಂಚರಿಸಿ ೧೨ ಕಿ.ಮೀ. ದೂರದ ಇಂಡಿ ಪಟ್ಟಣ ತಲುಪುತ್ತಾರೆ.
ಇತ್ತೀಚೆಗೆ ಬೈಕ್‌ಗಳ ಸಂಖ್ಯೆ ಹೆಚ್ಚಾಗಿದ್ದು ನಿತ್ಯ ಸಾವಿರಾರು ಬೈಕ್, ಸಾರಿಗೆ ಬಸ್, ಕಬ್ಬಿನ ಟ್ಯಾಕ್ಟರ್, ಖಾಸಗಿ ವಾಹನಗಳು ಈ ಗೇಟ್ ಮೂಲಕ ಸಂಚರಿಸುತ್ತಿವೆ. ಇತ್ತೀಚೆಗೆ ಜೋಡಿ ರೈಲು ಮಾರ್ಗ, ಈ ಮಾರ್ಗದಲ್ಲಿ ವಿದ್ಯುತ್ ಅಳವಡಿಸಿದ ದಿನದಿಂದ ಅಂತೂ ಈ ಭಾಗದಲ್ಲಿ ಗೂಡ್ಸ ರೈಲು ವಾಹನಗಳ ಓಡಾಟದ ಸಂಖ್ಯೆ ಹೆಚ್ಚಿದೆ. ಕೂಡಗಿ ಶಾಖೋತ್ಪನ್ನ ಘಟಕ್ಕೆ ನಿತ್ಯ ಕಲ್ಲಿದ್ದಲು ಪೂರೈಕೆ ಗೂಡ್ಸ ರೈಲು ಹಗಲಿರುಳು ಸಂಚಿಸುತ್ತವೆ. ಇದೇ ಗ್ರಾಮದ ರೈಲು ನಿಲ್ದಾಣದಲ್ಲಿ ಅಧಿಕ ಸಮಯದ ವರೆಗೆ ಗೂಡ್ಸ ರೈಲುಗಳ ನಿಲುಗಡೆಯಾಗಿತ್ತಿದೆ. ಪರಿಣಾಮ ಈ ಸ್ಥಳದಲ್ಲಿ ಮೇಲಿಂದ ಮೇಲೆ ರೇಲ್ವೆ ಗೇಟ್ ಹಾಕಲಾಗುತ್ತದೆ. ಇದರಿಂದ ಆಸ್ಪತ್ರೆಗೆ, ಶಾಲೆ ಕಾಲೇಜುಗಳಿಗೆ, ಸಂತೆ ಪೇಟೆಗೆ ದ್ವಿಚಕ್ರ, ತ್ರಿಚಕ್ರ ವಾಹನಗಳ ಮೂಲಕ ಲಗುಬಗೆಯಿಂದ ಸಂಚರಿಸುವ ಪ್ರಯಾಣಿಕರಿಗೆ ಭಾರಿ ತೊಂದರೆಯಾಗಿದೆ.
ಈ ರೇಲ್ವೆ ಗೇಟ್ ಬಳಿ ಎಡ ಹಾಗೂ ಬಲ ಬದಿಯಲ್ಲಿ ಜಾರು ರಸ್ತೆ ಇದೆ. ರೇಲ್ವೆ ಗೇಟ್ ತೆರೆದ ಬಳಿಕ ಹರಸಾಹಸದಿಂದ ಎತ್ತರದ ರೇಲ್ವೆ ಗೇಟ್ ತಲುಪಿದ ಎಲ್ಲ ವಾಹನಗಳು ದಾಟುವಾಗ ಈ ಗೇಟ್‌ಗೆ ಪಶ್ಚಿಮ ಭಾಗದಲ್ಲಿ ಅಳವಡಿಸಲಾದ ಕಬ್ಬಿಣದ ಹಾರೆಯ ಪಾಟಕ್ ಡೊಂಕಾಗಿದೆ. ಇದು ಎತ್ತರದ ವಾಹನಗಳಿಗೆ ನಿತ್ಯ ತಾಕುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ಹಾರಿಯ ಕೆಳಭಾಗದಲ್ಲಿ ಹಲವು ತಿಂಗಳುಗಳಿಂದ ಕಾಲು ಭಾಗದ ರಸ್ತೆ ಬಂದ್ ಮಾಡಲಾಗಿದೆ. ಇದರಿಂದ ವಾಹನ ಸವಾರರಿಗೆ ಸಂಚರಿಸಲು ತೊಂದರೆಯಾಗುತ್ತಿದೆ ಎಂದು ಲಚ್ಯಾಣ ಗ್ರಾಮದ ಶಿವಪುತ್ರ ವಾಡಿ ದೂರಿದ್ದಾರೆ.
ಇದು ಅತ್ಯಂತ ಹಳೆಯದಾದ ಅಂದರೆ ಮೀಟರ್ ಗೇಜ್ ಇದ್ದಾಗಿನಿಂದಲೂ ಗುರ್ತಿಸಲಾದ ಕ್ರಾಸಿಂಗ್ ಸ್ಥಳವಾಗಿದೆ. ಈ ಸ್ಥಳದಲ್ಲಿ ನಿತ್ಯ ವಾಹನಗಳ ದಟ್ಟಣೆ ಹೆಚ್ಚಿರುತ್ತದೆ. ಪ್ರಸ್ತುತ ಕಬ್ಬು ಸಾಗಾಟದ ಸೀಜನ್ ಇರುವದಿರಿಂದ ಕಬ್ಬಿನ ಟ್ಯಾಕ್ಟರ್ ವಾಹನಗಳ ಓಡಾಟ ಹೆಚ್ಚಿದೆ. ಆದ್ದರಿಂದ ಅವಘಡ ಸಂಭವಿಸುವ ಮುನ್ನ ಸಂಬಂಧಿಸಿ ದಕ್ಷಿಣ ಪಶ್ವಿಮ ರೇಲ್ವೆ ವಿಭಾಗೀಯ ನಿಯಂತ್ರಕರು ಬೇಗನೇ ಈ ರೇಲ್ವೆ ಫಾಟಕ್ ಬದಲಾಯಿಸಿ ಹೊಸ ಫಾಟಕ್ ಅಳವಡಿಸಿ ವಾಹನ ಸವಾರರಿಗೆ, ಯಾತ್ರಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಲಚ್ಯಾಣ, ಲೋಣಿ ಕೆ.ಡಿ. ಬರಗೂಡಿ, ಪಡನೂರ, ಅಹಿರಸಂಗ ಗ್ರಾಮದ ಜನರು, ರೈಲು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ತಾಲೂಕಿನ ಲಚ್ಯಾಣದಲ್ಲಿ ಅಂಕುಡೊಂಕಾದ ರೇಲ್ವೆ ಫಾಟಕ್, ಫಾಟಕ್ ಕೆಳಗೆ ಹಳಿ ಇಟ್ಟು ಕಾಲು ಭಾಗದ ರಸ್ತೆ ಬಂದ್ ಮಾಡಿದ ನೋಟ.



















