ವಿಜಯಪುರ | ಮಾದನಾಯಕನಹಳ್ಳಿ ಪೊಲೀಸ್ ಠಾಣಿ ಸಿಬ್ಬಂದಿ ಅಧಿಕಾರ ದುರ್ಬಳಕೆ : ಕೆಆರ್‌ಎಸ್ ಪ್ರತಿಭಟನೆ
ವಿಜಯಪುರ : ಮಾದನಾಯಕನಹಳ್ಳಿ ಪೊಲೀಸ್ ಠಾಣಿ ಸಿಬ್ಬಂದಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಕೆಆರ್‌ಎಸ್ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ) ಸದಸ್ಯರ ಮೇಲೆ ತೀವ್ರ ಹಲ್ಲೆ ಮಾಡಿದ್ದಾರೆ. ಮೊಬೈಲ್‌ಗಳನ್ನು ಕಸಿದುಕೊಂಡು ಅಶ್ಲೀಲ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಕೆಆರ್‌ಎಸ್ ಕಾರ್ಯಕರ್ತರು ವಿಜಯಪುರ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಘೋಷಣೆ ಹಾಗೂ ಬೃಹತ್ ಪ್ರತಿಭಟನೆಯ ಮೂಲಕ ಕರ್ನಾಟಕ ಸರಕಾರದ ಗೃಹ ಮಂತ್ರಿಗಳಿಗೆ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಅಶೋಕ ಜಾಧವ ಮಾತನಾಡಿ, ಸೆ.೨೬ರಂದು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಎರಡು ಪೊಲೀಸ್ ಠಾಣೆ ಸಿಬ್ಬಂದಿ ಬಲಾಡ್ಯರ ಜತೆ ಕೈಜೋಡಿಸಿ ಕುತಂತ್ರ ಎಸಗಿದ್ದಾರೆ. ರೈತರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ನಿಂತು ಕೆಆರ್‌ಎಸ್ ಸದಸ್ಯರು ಧ್ವನಿ ಎತ್ತಿದ್ದಕ್ಕಾಗಿ ಪ್ರತೀಕಾರವಾಗಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶಿವಾನಂದ ಯಡಹಳ್ಳಿ ಮಾತನಾಡಿ,ಮಾದನಾಯಕನಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ಮುರಳಿದರ್ ಮತ್ತು ಸಿಬ್ಬಂದಿ, ನೆಲಮಂಗಲ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ನರೇಂದ್ರಬಾಬು ನಮ್ಮ ಪಕ್ಷದ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಮೊಬೈಲ್ ಕಸಿದುಕೊಂಡು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿ ಸುಳ್ಳು ಕೇಸು ದಾಖಲಿಸಿಕೊಂಡಿರುತ್ತಾರೆ. ಇವರ ಈ ನಡೆಯನ್ನು ನಾವು ತೀವ್ರ ಖಂಡಿಸುವುದರ ಮೂಲಕ ಇವರನ್ನು ತಕ್ಷಣದಿಂದಲೇ ಅಮಾನತ್ತು ಮಾಡಿ ಆದೇಶ ಹೊರಡಿಸಬೇಕು. ಇಲ್ಲದೇ ಹೋದಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟವನ್ನು ಕೈಗೊಳ್ಳಲಾಗುವದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗಣಪತಿ ರಾಠೋಡ, ದುರ್ಗಪ್ಪ ಬೂದಿಹಾಳ, ಸೀನು ಹಿಪ್ಪರಗಿ, ಲಕ್ಷö್ಮಣ ಚಡಚಣ, ನಬಿ ಹುಣಶ್ಯಾಳ, ಮುತ್ತು ಹೊನಗೊಂಡ, ಸುರೇಂದ್ರ ಕುಮಸಲೆ, ಹಮೀದ ಇನಾಮದಾರ, ನಬಿರಸೂಲ ಜಮಾದಾರ, ಮಲ್ಲಿಕಾರ್ಜುನ ಬಿರಾದಾರ, ಲಕ್ಷö್ಮಣ ಕೋಳಿ, ರಮಜಾನ ಕೊಂಕಣಿ, ದೇಸು ಚವ್ಹಾಣ, ಘೋರಕನಾಥ ಚವ್ಹಾಣ, ಪರಶುರಾನ ಕೋಣಕಟ್ಟಿ, ವಿನೋದ ವಾಲಿಕಾರ, ಶ್ರೀಶೈಲ ತಳವಾರ, ಭೀಮಾಶಂಕರ ಕಾಂಬಳೆ, ರಾವುತಪ್ಪ ಮದಭಾವಿ, ವಿಕ್ರಮ ವಾಗಮೋರೆ, ಸುನೀಲ ರಾಠೋಡ ಇನ್ನಿತರರು ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು.