ವಿಧಾನ ಪರಿಷತ್ ಚುನಾವಣೆ : ಎಸ್.ಕೆ. ಬೆಳ್ಳುಬ್ಬಿ ಅವರಿಗೆ ಬಿಜೆಪಿ ಟಿಕೇಟ್ ನೀಡಿ :ದಿಗಂಬರೇಶ್ವರ ಸಂಸ್ಥಾನಮಠದ ಕಲ್ಲಿನಾಥ
ವಿಜಯಪುರ : ಶಾಸಕರ ಮೂಲಕ ನೇಮಕವಾಗುವ ವಿಧಾನ ಪರಿಷತ್ ಸದಸ್ಯರ 11 ಸ್ಥಾನಗಳಿಗೆ ಚುನಾವಣಾ ಆಯೋಗ ಜೂ. 13 ರಂದು ಚುನಾವಣೆ ಘೋಷಿಸಿದ್ದು, ಬಿಜೆಪಿಯಿಂದ ಹಿರಿಯ ಮಾಜಿ ಸಚಿವ, ರಾಜ್ಯ ಗಾಣಿಗ ಸಮುದಾಯದ ಪ್ರಭಾವಿ ನಾಯಕರಾದ ಎಸ್.ಕೆ. ಬೆಳ್ಳುಬ್ಬಿ ಅವರಿಗೆ ಬಿಜೆಪಿ ಟಿಕೇಟ್ ನೀಡಬೇಕೆಂದು ದಿಗಂಬರೇಶ್ವರ ಸಂಸ್ಥಾನಮಠದ ಕಲ್ಲಿನಾಥ ಮಹಾಸ್ವಾಮೀಜಿ ಬಿಜೆಪಿ ಪಕ್ಷದ ವರಿಷ್ಠರಿಗೆ ಒತ್ತಾಯಿಸಿದರು.
ವಿಜಯಪುರದಲ್ಲಿ ಮಂಗಳವಾರ ಗಾಣಿಗ ಸಮುದಾಯದ ಜಿಲ್ಲಾ ನಾಯಕರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಕಲ್ಲಿನಾಥ ಸ್ವಾಮೀಜಿ ಮಾತನಾಡಿದರು. ರಾಜ್ಯದಲ್ಲಿ ಸುಮಾರು 80 ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ಗಾಣಿಗ ಸಮಾಜವು ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿಜಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯಗಳು ಹಾಗೂ ನಾಯಕತ್ವ ಗುಣಗಳನ್ನು ಮೆಚ್ಚಿಕೊಂಡು ಹಲವಾರು ದಶಕಗಳಿಂದ ಗಾಣಿಗ ಸಮಾಜ ಬಿಜೆಪಿ ಬೆಂಬಲಿಸಿಕೊಂಡು ಬಂದಿದೆ.
ರಾಜ್ಯದಲ್ಲಿ ಗಾಣಿಗ ಸಮುದಾಯದ ಪ್ರಭಾವಿ ನಾಯಕರಾಗಿರುವ ಹಿರಿಯ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿಯವರು ಸಂತ್ರಸ್ತರು, ರೈತರ ಪರ ಹೋರಾಟಗಳ ಮೂಲಕವೇ ಮಂಡಲ ಪಂಚಾಯಿತಿಯಿಂದ ಸಚಿವ ಸ್ಥಾನದವರೆಗೂ ಪರಿಶ್ರಮದಿಂದ ಬೆಳೆದು ಬಂದು ಇಂದು ಬಿಜೆಪಿ ಪಕ್ಷಕ್ಕೆ ಶಕ್ತಿಯಾಗಿ ನಿಂತಿದ್ದಾರೆ. ಮೂರು ಬಾರಿ ವಿಜಯಪುರ ಜಿಲ್ಲಾಧ್ಯಕ್ಷರಾಗಿ ಜಿಲ್ಲೆಯಲ್ಲಿ ಸಮರ್ಥವಾಗಿ ಪಕ್ಷ ಸಂಘಟನೆ ಮಾಡಿ ಹೆಚ್ಚಿನ ಶಾಸಕ ಸ್ಥಾನಗಳನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು ಸಚಿವರಾಗಿದ್ದ ವೇಳೆ ಕೇಂದ್ರ ಬಿಜೆಪಿ ಸರ್ಕಾರದಲ್ಲಿ ಹಿರಿಯ ಸಚಿವರೊಂದಿಗೆ ಚರ್ಚಿಸಿ ಮನವೊಲಿಸಿ ವಿಜಯಪುರ ಜಿಲ್ಲೆಗೆ ಉಷ್ಣ ವಿದ್ಯುತ್ ಸ್ಥಾವರ ತರುವ ಮೂಲಕ ವಿದ್ಯುತ್ ವಿಚಾರದಲ್ಲಿ ರಾಜ್ಯವನ್ನು ಸ್ವಾಲಂಬಿಯನ್ನಾಗಿಸಿದ್ದಾರೆ.
ಬೆಳ್ಳುಬ್ಬಿಯವರು ದೇಶದಲ್ಲೇ ದೊಡ್ಡದಾದ ಕೊರ್ತಿ-ಕೊಲ್ಹಾರ ಸೇತುವೆ ಸರದಾರರಾಗಿ, ಬಾಗಲಕೋಟೆಯಲ್ಲಿ ತೋಟಗಾರಿಕೆ ವಿವಿ ಸ್ಥಾಪಿಸಿದಲ್ಲದೇ ಅವಳಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ನೈಜ್ಯ ಅಭಿವೃದ್ಧಿ ಹರಿಕಾರರಾಗಿದ್ದಾರೆ. ಕಳೆದ ಲೋಕಸಭೆ ಚುನಾವಣೆ ಸೇರಿ ಎಲ್ಲಾ ಚುನಾವಣೆಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಳ್ಳುವ ಮೂಲಕ ಶಕ್ತಿ ತುಂಬಿದ್ದಾರೆ. ಗಾಣಿಗ ಸಮುದಾಯ ಎಂದಿಗೂ ಬಿಜೆಪಿ ಪರವಾಗಿರುವ ಸಮಾಜ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗಾಣಿಗ ಸಮುದಾಯದ ನಾಯಕರಾದ ಲಕ್ಷ್ಮಣ ಸವದಿಯವರಿಗೆ ಟಿಕೇಟ್ ಕೊಡದಿರುವ ಕಾರಣ ರಾಜ್ಯದಲ್ಲಿ ಗಾಣಿಗ ಸಮುದಾಯದ ಮತಗಳು ವಿಭಜನೆಯಾಗಿವೆ ಎಂದು ಇಂಟಿಲಿಜೆನ್ಸ್ ರಿಪೋರ್ಟ್ ನೀಡಿತ್ತು.
ರಾಜ್ಯ ಬಿಜೆಪಿ ಪಕ್ಷದಲ್ಲಿ ಸದ್ಯ ಗಾಣಿಗ ಸಮಾಜದ ಒಬ್ಬರೂ ಶಾಸಕರು, ಎಂಎಲ್ಸಿಗಳಿಲ್ಲ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ದೊಡ್ಡ ಸಮುದಾಯವಾದ ಗಾಣಿಗ ಸಮಾಜದ ಸಂಪೂರ್ಣ ಬೆಂಬಲ ಅತ್ಯಗತ್ಯವಾಗಿದೆ. ಹಾಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಿಎಂ ಯಡಿಯೂರಪ್ಪ, ರಾಷ್ಟ್ರೀಯ ನಾಯಕರಾದ ಜೆ ಪಿ ನಡ್ಡಾ, ಪ್ರಧಾನಿ ಮೋದಿ, ಅಮೀತ್ ಶಾ ಎಲ್ಲರೂ ಸೇರಿ ಈ ಎಂಎಲ್ಸಿ ಚುನಾವಣೆಯಲ್ಲಿ ಬಿಜೆಪಿಯಿಂದ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿಯವರಿಗೆ ಟಿಕೇಟ್ ನೀಡಿ ಮತ್ತೆ ರಾಜ್ಯದಲ್ಲಿ ಗಾಣಿಗ ಸಮುದಾಯದ ಪೂರ್ಣ ಬೆಂಬಲ ಪಡೆಯುವ ಕೆಲಸ ಮಾಡಬೇಕು ಎಂದು ಕಲ್ಲಿನಾಥ ಸ್ವಾಮೀಜಿ ಒತ್ತಾಯಿಸಿದರು.
ಗಾಣಿಗ ಸಮಾಜದ ಹಿರಿಯ ನಾಯಕರಾದ ಹೆಚ್. ಆರ್. ಉಟಗಿಯವರು ಮಾತನಾಡಿ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹುಟ್ಟು ಹೋರಾಟಗಾರರು, ಮಂಡಲ ಪಂಚಾಯತಿಯಿಂದ ಸಚಿವರಾದರೂ ರೈತ ನಾಯಕರಾಗೇ ಗುರುತಿಸಿಕೊಂಡವರು. ರಾಜ್ಯದಲ್ಲಿ ಬಿಜೆಪಿ ಪಕ್ಷ ಸಂಘಟನೆಗೆ ಸಾಕಷ್ಟು ಶ್ರಮಿಸಿದ್ದಾರೆ. ಮೇಲಾಗಿ ಇಡಿ ನಮ್ಮ ಗಾಣಿಗ ಸಮುದಾಯ ಅವರ ಬೆನ್ನಿಗಿದೆ. ವಿಜಯಪುರ ಜಿಲ್ಲಾ ರಾಜಕಾರಣದಲ್ಲಿ ಗಾಣಿಗ ಸಮಾಜ ನಿರ್ಣಾಯಕ ಪಾತ್ರ ವಹಿಸಲಿದೆ. ಲೋಕಸಭಾ ಚುನಾವಣೆಯಲ್ಲಿ ಗಾಣಿಗರು ನೂರಕ್ಕೆ ತೊಂಬತ್ತರಷ್ಟು ಬಿಜೆಪಿಗೆ ಬೆಂಬಲಿಸಿದ್ದಾರೆ. ಚುನಾವಣೆ ಘೋಷಣೆಯಾಗಿರುವ 11 ಎಂಎಲ್ಸಿ ಸ್ಥಾನಗಳಲ್ಲಿ ಬಿಜೆಪಿಗೆ ಸುಲಭವಾಗಿ ಮೂರು ಸ್ಥಾನಗಳು ಸಿಗಲಿದ್ದು, ಅದರಲ್ಲಿ ಒಂದು ಸ್ಥಾನಕ್ಕೆ ನಮ್ಮ ನಾಯಕ ಎಸ್.ಕೆ.ಬೆಳ್ಳುಬ್ಬಿಯವರಗೆ ನೀಡಬೇಕೆಂದು ಹೆಚ.ಆರ್.ಉಟಗಿ ಆಗ್ರಹಿಸಿದರು.
ಈ ವೇಳೆ ಬಿಜೆಪಿ ಮುಖಂಡರಾದ ಪ್ರಕಾಶ ಹಿಟ್ನಳ್ಳಿ, ಶರಣು ಕಾಖಂಡಕಿ, ಬಸವರಾಜ ಹಳ್ಳಿ, ಸಂತೋಷ ಕಕ್ಕಳಮೇಲಿ, ಹುಚ್ಚಪ್ಪ ಬಾಟಿ, ಶ್ರೀಮಂತ ಹಂಗರಗಿ, ಮಂಜುನಾಥ ತುಂಬರಮಟ್ಟಿ, ಆನಂದ ಬಿಸ್ಟಗೊಂಡ ಸೇರಿದಂತೆ ಹಲವು ಪ್ರಮುಖರಿದ್ದರು.