ವೇಮನರು ಜಾತಿ, ಧರ್ಮಗಳನ್ನು ಮೀರಿ ಲೋಕ ಶಾಂತಿ ಸಾರಿದವರು : ಶಿಕ್ಷಕ ಬಂಡೆ
ಇಂಡಿ: ಜನಸಾಮಾನ್ಯರ ಕವಿ, ಜೀವಕಾರುಣ್ಯದ ಕವಿ, ಲೋಕಕ್ಕೆ ಮಾರ್ಗದರ್ಶಿಯಾಗಿದ್ದ ವೇಮನರು ತಮ್ಮ
ಜೀವಿತಾವಧಿಯ ಕಾಲದಲ್ಲಿ ಜಾತೀಯತೆ, ಅಂಧಶ್ರದ್ಧೆ,
ಮೇಲುಕೀಳುಗಳನ್ನು ತಮ್ಮ ಪದ್ಯಗಳ ಮೂಲಕ
ಧಿಕ್ಕರಿಸಿದ ಶ್ರೇಷ್ಠ ವಚನಕಾರರಾಗಿದ್ದರು ಎಂದು
ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶುಕ್ರವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್
ಶಾಲೆಯಲ್ಲಿ ಹಮ್ಮಿಕೊಂಡ ಮಹಾಯೋಗಿ ವೇಮನರ
ಜಯಂತಿ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ವೇಮನರು ಜಾತಿ, ಧರ್ಮಗಳನ್ನು ಮೀರಿ ಲೋಕ ಶಾಂತಿ ಸಾರಿದರು. ಆದರ್ಶದ ಜೀವನವನ್ನು ನಡೆಸಿ ಸಮಾಜಕ್ಕೆ ಅನುಕರಣೀಯ ತತ್ವಗಳನ್ನು ತಮ್ಮ ವಚನಗಳ ಮೂಲಕ ಬೋಧಿಸಿದರು. ಅವರ ಜೀವನದ ಆದರ್ಶಗಳನ್ನು ಸಮಾಜಕ್ಕೆ ಹಾಗೂ ಮುಂದಿನ ಪೀಳಿಗೆಗೆ ತಿಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಶಿಕ್ಷಕ ಎಸ್.ಎಸ್. ಅರಬ ಮಾತನಾಡಿ, ಬುದ್ದನ ಕರುಣೆ,
ಅಂಬೇಡ್ಕರರ ಸಮಾನತೆ, ಕಬೀರರ ಧಾರ್ಮಿಕ ಸೌಹಾರ್ದ, ಬಸವಣ್ಣ, ಕುವೆಂಪು ಅವರ ವಿಶ್ವಮಾನವ ಸಂದೇಶ ಎಲ್ಲವೂ ವೇಮನರ ಕಾವ್ಯದಲ್ಲಿದ್ದು, ಅವರಿಂದ ಉತ್ಕøಷ್ಟ ಸಾಹಿತ್ಯ ಸೃಷ್ಟಿಯಾಯಿತು. ವೇಮನರ ಸಾಹಿತ್ಯವು ಜನರ ಮನಸ್ಸಿಗೆ ಪರಿಪೋಷಣೆ ನೀಡುವುದಲ್ಲದೆ ಜೀವನದಲ್ಲಿ ಪ್ರತಿಕೂಲ ಪ್ರಸಂಗ ಬಂದಾಗ ಸಾಂತ್ವನ ಹೇಳುತ್ತದೆ. ಪ್ರಸನ್ನತೆಯನ್ನು ತಂದುಕೊಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯ
ಶಿಕ್ಷಕ ಎ.ಎಂ. ಬೆದ್ರೇಕರ ಮಾತನಾಡಿ, ವೇಮನರು
ಲೋಕಸತ್ಯ, ದೈವಸತ್ಯ ಹಾಗೂ ಜೀವನ ಮೌಲ್ಯಗಳನ್ನು ಆಡು ಭಾಷೆಗಳ ಮೂಲಕ ಜನರಿಗೆ ತಲುಪಿಸಿದರು. ಜಾತಿ ಭೇದಗಳನ್ನು ವಿರೋಧಿಸಿ ಸಮಾನತೆಯನ್ನು ಸಾರಿದರು. ಅವರ ತತ್ವ ಆದರ್ಶಗಳು ಇಂದಿನ ಯುವಜನತೆಗೆ
ಅನುಕರಣೀಯವಾಗಿವೆ ಎಂದರು.ಶಿಕ್ಷಕಿ ಎಸ್.ಪಿ. ಪೂಜಾರಿ ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.
ಇಂಡಿ: ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಮಹಾಯೋಗಿ ವೇಮನರ ಜಯಂತಿಯಲ್ಲಿ ಸಂತೋಷ ಬಂಡೆ ಮಾತನಾಡಿದರು.