ರಾಯಚೂರು: ಜಿಲ್ಲೆಯಾದ್ಯಂತ ವಾರಾಂತ್ಯ ಕರ್ಪ್ಯೂ ಕಟ್ಟುನಿಟ್ಟಾಗಿ ಜಾರಿಯಾಗಿದ್ದು ಜನ ರಸ್ತೆಗೆ ಇಳಿಯದೆ ನಗರದ ಹಲವು ರಸ್ತೆಗಳು ಸ್ಥಬ್ದವಾಗಿದ್ದು ನಗರದಲ್ಲಿ ಉತ್ತಮ ರೆಸ್ಪನ್ಸ್ ಸಿಕ್ಕಿದೆ.
ರಾಯಚೂರು ನಗರದ ತೀನ್ ಕಂದಿಲ್, ಸೂಪರ್ ಮಾರ್ಕೆಟ್, ಬಟ್ಟೆ ಬಜಾರ್, ಸರಾಫ್ ಬಜಾರ್, ಪಟೇಲ್ ರಸ್ತೆ ಸೇರಿದಂತೆ ಅಗತ್ಯ ವಸ್ತು ಮಾರಾಟ ಮಳಿಗೆಗಳನ್ನು ಹೊರತುಪಡಿಸಿ ಉಳಿದೆಲ್ಲ ಮಳಿಗೆಗಳನ್ನು ಬಂದ್ ಆಗಿದ್ದವು. ಸರಕು ವಾಹನಗಳ ಸಂಚಾರ ಮತ್ತು ಸರ್ಕಾರಿ ಬಸ್‌ಗಳ ಸಂಚಾರಕ್ಕೆ ಅವಕಾಶ ಇದ್ದರೂ ಎಂದಿನಂತೆ ವಾಹನಗಳು ಸಂಚರಿಸಲಿಲ್ಲ.
ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಪ್ರತಿಯೊಂದು ಬಸ್ ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದ್ದವು. ಊರಿಂದ ಊರಿಗೆ ಸಂಚರಿಸುವುದಕ್ಕೆ ಅವಕಾಶ ನೀಡಲಾಗಿದೆ. ಆದರೆ ಸಂಕ್ರಮಣ ಹಬ್ಬ ಇರುವ ಕಾರಣ ಹಾಗೂ ಕೋವಿಡ್ ಸೋಂಕು ವ್ಯಾಪಿಸಿಕೊಂಡಿರುವುದರಿಂದ ಸ್ವಯಂ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳಿಂದ ಹೊರಬರಲಿಲ್ಲ. ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಕನಕದಾಸ ವೃತ್ತ, ಚಂದ್ರಮೌಳೇಶ್ವರ ಸರ್ಕಲ್, ಬಸನಭಾವಿ ಸರ್ಕಲ್, ಶೆಟ್ಟಿಭಾವಿ ಸರ್ಕಲ್, ನವೋದಯ ಕಾಲೇಜ್, ಡಿಸಿ ಬಂಗ್ಲೆ ಪಕ್ಕದಲ್ಲಿ ಸೇರಿದಂತೆ ವಿವಿಧೆಡೆ ಪೊಲೀಸರು ನಾಕಾಬಂದಿ ಹಾಕಿದ್ದರು. ಪಾದಚಾರಿಗಳನ್ನು ಹಾಗೂ ವಾಹನಗಳಲ್ಲಿ ಸಂಚರಿಸುತ್ತಿದ್ದವರನ್ನು ಪೊಲೀಸರು ವಿಚಾರಿಸಿ, ಮುಂದೆ ಸಂಚರಿಸುವುದಕ್ಕೆ ಅವಕಾಶ ನೀಡುತ್ತಿರುವುದು ಕಂಡುಬಂತು. ಅನಗತ್ಯ ಸಂಚಾರಿಗಳಿಗೆ ಹಾಗೂ ಮಾಸ್ಕ್ ಧರಿಸದೆ ಹೊರಬಂದಿದ್ದ ಜನರಿಂದ ದಂಡ ವಸೂಲಿ ಮಾಡಿದರು.
ಕರ್ಪ್ಯೂ ಇದ್ದರೂ ಕೃಷಿ ಸರಕುಗಳ ಮಾರಾಟಕ್ಕೆ ಯಾವುದೇ ಅಡೆತಡೆ ಇಲ್ಲ. ಆದರೂ ಹಬ್ಬ ಇರುವುದರಿಂದ ರೈತರು ಮಾರುಕಟ್ಟೆಗಳತ್ತ ಶನಿವಾರ ಬಂದಿರಲಿಲ್ಲ. ಹೀಗಾಗಿ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣವು ಬಿಕೋ ಎನ್ನುತ್ತಿತ್ತು. ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ.
ಗಡಿಯಲ್ಲಿ ತಪಾಸಣೆ ಇಲ್ಲ:
ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ಪ್ರತಿದಿನ ಮೂರಂಕಿಯಲ್ಲಿ ಬರುತ್ತಿವೆ. ಸೋಂಕು ವ್ಯಾಪಿಸುವುದನ್ನು ತಡೆಯುವುದಕ್ಕಾಗಿ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಕಾರ್ಯ ನಡೆಯುತ್ತಿಲ್ಲ.
ಶಕ್ತಿನಗರ ಚೆಕ್‌ಪೋಸ್ಟ್, ಸಿಂಗನೋಡಿ ಚೆಕ್‌ಪೋಸ್ಟ್‌ಗಳು ನಾಮಕಾವಸ್ತೆ ಆಗಿವೆ. ಹೊರರಾಜ್ಯಗಳಿಂದ ಬರುವ ಜನರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆ ಮಾಡುವುದು ಚುರುಕಾಗಿಲ್ಲ. ಹೆಚ್ಚುವರಿ ಜಿಲ್ಲಾಧಿಕಾರಿ, ಮಾನ್ವಿ ತಹಶೀಲ್ದಾರ್, ಒಬ್ಬರು ಹೆಡ್‌ಕಾನ್‌ಸ್ಟೇಬಲ್ ಸೇರಿದಂತೆ 109 ಜನರಿಗೆ ಶನಿವಾರ ಕೋವಿಡ್ ದೃಢವಾಗಿದೆ.