ಮಕ್ಕಳು ಭೀಕರ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಮುನ್ನ ಲಸಿಕೆ ನೀಡಿ..!
ಇಂಡಿ: ಲಸಿಕೆಗಳಿಂದ ತಡೆಗಟ್ಟಬಹುದಾದ ರೋಗಗಳ ನಿಯಂತ್ರಣಕ್ಕಾಗಿ ವಯಸ್ಸಿನ ಅನುಗುಣವಾಗಿ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ಮಾರಣಾಂತಿಕ ರೋಗಗಳ ದಿಪ್ತೀರಿಯಾ, ನಿಮೋನಿಯಾ, ಮೆದುಳು ಜ್ವರ, ಪೋಲಿಯೋ, ಬಾಲಕ್ಷಯ, ಕಾಮಾಲೆ, ಅತೀಸಾರ ಭೇದಿ ಅಂತಹ ಕಾಯಿಲೆಗಳು ಭಾರದಂತೆ ತಡೆಗಟ್ಟುತ್ತದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸುನಂದಾ ಅಂಬಲಗಿ ಹೇಳಿದರು.
ಶನಿವಾರ ತಾಲೂಕಿನ ಹಂಜಗಿ ಗ್ರಾಮದ ಉಪ ಕೇಂದ್ರದ ಸೈಯದ್ ವಸತಿಯ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಕ್ಕಳಿಗೆ ಬರುವ ಮಾರಕ ರೋಗಗಳ ಬಗ್ಗೆ ಅರಿವು ಮೂಡಿಸುವ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.
ಭವಿಷ್ಯದಲ್ಲಿ ಮಕ್ಕಳಿಗೆ ಕಾಡುವ ಮಾರಕ ರೋಗಗಳನ್ನು ತಡೆಯಲು ಮಗು ಹುಟ್ಟಿದಾಗಿನಿಂದಲೇ ನಿಗದಿಪಡಿಸಿರುವ ಎಲ್ಲ ಲಸಿಕೆಗಳನ್ನು ಕೊಡಿಸಬೇಕು. ಮಕ್ಕಳು ಭೀಕರ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಕಾರಣ ಮಕ್ಕಳಲ್ಲಿ ರೋಗಗಳನ್ನು ತಡೆಗಟ್ಟುವ ಆಂಟಿ ಬಾಡೀಸ್ ಇರುವುದಿಲ್ಲ. ಲಸಿಕೆಗಳು ರಕ್ತದಲ್ಲಿ ಆಂಟಿ ಬಾಡಿ ತಯಾರಿಕೆಗೆ ಪ್ರಚೋದನೆ ನೀಡುತ್ತವೆ ಹಾಗೂ ವ್ಯಕ್ತಿ ರೋಗದಿಂದ ನರಳದೇ ಇರುವಂತೆ ಮಾಡುತ್ತವೆ. ನಿಗದಿತ ದಿನದಂದು ತಪ್ಪದೇ ಲಸಿಕೆ ಹಾಕಲು ಪ್ರಯತ್ನಿಸಬೇಕು. ಸಾಧ್ಯವಾಗದಿದ್ದರೆ ಎಂದು ಸಾಧ್ಯವಾಗುತ್ತದೆಯೋ, ಅಂದು ಲಸಿಕೆ ಹಾಕಿಸಬಹುದು ಎಂದರು.
ಹೆಚ್.ಆಯ್.ಓ ವಿರೇಶ ಹಿರೇಮಠ ಮಾತನಾಡಿ, ಗರ್ಭಿಣ ಯರಿಗೆ ಟಿ.ಡಿ ಲಸಿಕೆ ಹಾಗೂ ಕಬ್ಬಿಣಾಂಶ ಮಾತ್ರೆ ತಗೆದುಕೊಳ್ಳಬೇಕು. ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸದೇ ಅನೇಕ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಉತ್ತಮ ಆರೋಗ್ಯ ಹೊಂದಲು ಪೌಷ್ಟಿಕಾಂಶದ ಆಹಾರವನ್ನು ಮನೆಯಲ್ಲಿ ತಯಾರಿಸಿ ಸೇವಿಸಬೇಕು. ಆರೋಗ್ಯ ತಪಾಸಣೆ ಮಾಡಿಕೊಂಡು ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.
ಇಂಡಿ: ತಾಲೂಕಿನ ಹಂಜಗಿ ಗ್ರಾಮದ ಉಪ ಕೇಂದ್ರದ ಸೈಯದ್ ವಸತಿಯ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಕ್ಕಳಿಗೆ ಬರುವ ಮಾರಕ ರೋಗಗಳ ಬಗ್ಗೆ ಅರಿವು ಮೂಡಿಸುವ ಕರ‍್ಯಕ್ರಮದಲ್ಲಿ ಸುನಂದಾ ಅಂಬಲಗಿ ಮಾತನಾಡಿದರು.




















