ರಾಯಚೂರು : ಒಳ್ಳೆಯ ಕೆಲಸ ಕಾರ್ಯಗಳು ವ್ಯಕ್ತಿಯನ್ನು ಅಜರಾಮರವಾಗಿ ಉಳಿಯುವಂತೆ ಮಾಡುತ್ತದೆ ಎನ್ನುವುದು ಶಾಸ್ತ್ರಗಳಲ್ಲಿ ದಾಖಲಿಸಲಾಗಿದ್ದು, ನಗರಸಭೆ ಮಾಜಿ ಉಪಾಧ್ಯಕ್ಷರಾದ ದೊಡ್ಡ ಮಲ್ಲೇಶಪ್ಪ ಅವರು ಉತ್ತಮ ಕೆಲಸ ಕಾರ್ಯಗಳಿಂದ ನಮ್ಮೆಲ್ಲರಲ್ಲಿ ಅಭಿಮಾನದ ಶರೀರವಾಗಿ ಚಿರಕಾಲ ಉಳಿಯಲಿದ್ದಾರೆಂದು ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಿದರು.
ಅವರಿಂದು ಗದ್ವಾಲ್ ರಸ್ತೆಯಲ್ಲಿರುವ ವೀರಾಂಜಿನೇಯ್ಯ ಕಲ್ಯಾಣ ಮಂಟಪದಲ್ಲಿ ದಿ.ಯು.ದೊಡ್ಡ ಮಲ್ಲೇಶಪ್ಪ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ದೊಡ್ಡ ಮಲ್ಲೇಶಪ್ಪ ಅವರು ಅಕಾಲಿಕ ನಿಧನದ ನಂತರ ಅವರ ಸ್ಮರಣಾರ್ಥವಾಗಿ ಉಚಿತ ಆರೋಗ್ಯ ಶಿಬಿರ ನಡೆಸಲಾಗುತ್ತಿದೆ. ಈ ಶಿಬಿರ ಅತ್ಯಂತ ಅರ್ಥಪೂರ್ಣ ಮತ್ತು ಸಮಯೋಚಿತವಾಗಿದೆ. ದೊಡ್ಡ ಮಲ್ಲೇಶಪ್ಪ ಅವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಉತ್ತಮ ಕೆಲಸ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ರಾಜಕೀಯ, ಸಾಮಾಜಿಕ ಹಾಗೂ ಸಮುದಾಯದ ಅಭಿವೃದ್ಧಿಗಾಗಿ ಮತ್ತು ದೀನ ದಲಿತರ ಶ್ರೇಯಾಭಿವೃದ್ಧಿಗಾಗಿ ನಿರ್ವಹಿಸಿದ ಕೆಲಸ ಕಾರ್ಯಗಳು ಅವರನ್ನು ಇಂದು ಅಭಿಮಾನದ ರೂಪದಲ್ಲಿ ಅಜರಾಮರಗೊಳಿಸಿದೆ.
ಆರೋಗ್ಯ ಪ್ರತಿಯೊಬ್ಬರಿಗೆ ಅತ್ಯಂತ ಪ್ರಮುಖವಾಗಿದೆ. ಅಷ್ಟೈಶ್ವರ್ಯಗಳಿದ್ದು, ಆರೋಗ್ಯವಿಲ್ಲದಿದ್ದರೇ, ಆ ಸಂಪತ್ತಿನ ಭೋಗ ಮಾಡುವ ಅವಕಾಶದಿಂದ ವ್ಯಕ್ತಿ ವಂಚಿತನಾಗುತ್ತಾನೆ. ಈ ಹಿನ್ನೆಲೆಯಲ್ಲಿ ದೀನ ದಲಿತರು ಬೇದವಿಲ್ಲದೇ, ಎಲ್ಲಾರಿಗೂ ಉಚಿತ ಆರೋಗ್ಯ ಶಿಬಿರದ ಮೂಲಕ ಉತ್ತಮ ಆರೋಗ್ಯ ವ್ಯವಸ್ಥೆಗೆ ದೊಡ್ಡ ಮಲ್ಲೇಶಪ್ಪ ಅವರ ಪ್ರತಿಷ್ಠಾನದ ವತಿಯಿಂದ ಈ ಕಾರ್ಯ ನಿರ್ವಹಿಸುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ. ಈ ಮೂಲಕ ದೊಡ್ಡ ಮಲ್ಲೇಶಪ್ಪ ಅವರು ಚಿರಕಾಲ ಜನರ ಮನಸ್ಸಿನಲ್ಲಿ ಚಿರಾಯುವಾಗಿ ಉಳಿಯಲು ಕಾರಣವಾಗಲಿದೆಂದ ಶ್ರೀಗಳು, ಅವರ ಕುಟುಂಬ ಮಲ್ಲೇಶಪ್ಪ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ರಾಯರು ನೀಡಲೆಂದು ಆಶೀರ್ವಾದಿಸಿದರು.
ಶಾಸಕ ಡಾ.ಶಿವರಾಜ ಪಾಟೀಲ್ ಅವರು ಮಾತನಾಡುತ್ತಾ, ದೊಡ್ಡ ಮಲ್ಲೇಶಪ್ಪ ಅವರು ಒಂದು ಶಕ್ತಿಯಾಗಿ ನಗರದಲ್ಲಿ ಗುರುತಿಸಿಕೊಂಡಿದ್ದರು. ಒಬ್ಬ ವ್ಯಕ್ತಿ ತನ್ನ ಸ್ವಯಂ ಕೃಷಿಯಿಂದ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಒಬ್ಬ ಪ್ರಬಲ ಶಕ್ತಿಯಾಗಿ ಅಭಿವೃದ್ಧಿ ಹೊಂದಿರುವುದಕ್ಕೆ ದೊಡ್ಡ ಮಲ್ಲೇಶಪ್ಪ ಅವರೇ ನಿದರ್ಶನವಾಗಿದ್ದಾರೆ. ತನ್ನ ಮನಸ್ಸಿನಲ್ಲಿ ಏನಾದರೂ ಹೇಳಬೇಕೆಂದು ಭಾವನೆ ಮೂಡಿದರೇ, ಅದನ್ನು ಯಾವುದೇ ಆತಂಕವಿಲ್ಲದೇ, ನಿಷ್ಟೂರವಾಗಿ ಹೇಳುವಂತಹ ಧೈರ್ಯ ಅವರದ್ದಾಗಿತ್ತು.
ಮಲ್ಲೇಶಪ್ಪರಂತಹ ಪ್ರಬಲ ನಾಯಕರನ್ನು ಕಳೆದುಕೊಂಡಿರುವುದು ಮುನ್ನೂರುಕಾಪು ಸಮಾಜ, ರಾಯಚೂರು, ನಮ್ಮ ಪಕ್ಷವೂ ಬಡವಾಗುವಂತೆ ಮಾಡಿದೆ. ದೊಡ್ಡ ಮಲ್ಲೇಶಪ್ಪ ಅವರು ಮಾಡಿದಂತಹ ಕೆಲಸ, ಕಾರ್ಯಗಳು ಶಾಶ್ವತವಾಗಿ ಉಳಿಯಬೇಕೆನ್ನುವ ಉದ್ದೇಶದಿಂದ ಅವರ ಕುಟುಂಬದವರು ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮ ಅತ್ಯಂತ ಮಹತ್ವದ್ದಾಗಿದೆ. ಈ ಮೂಲಕ ದೊಡ್ಡ ಮಲ್ಲೇಶಪ್ಪ ಅವರು ಮನೆ ಮನೆಯ ಮಾತಾಗುವಂತಹ ಅವರ ಕುಟುಂಬದವರು ಶ್ರಮಿಸುತ್ತಿದ್ದಾರೆ. ಇವರ ಕುಟುಂಬಕ್ಕೆ ಪಕ್ಷ ಮತ್ತು ನಾನು ಸದಾಕಾಲ ಬೆನ್ನುಲುಬಾಗಿ ನಿಲ್ಲುತ್ತೇನೆಂದು ಹೇಳಿದರು.
ಸಂಸದ ರಾಜಾ ಅಮರೇಶ್ವರ ನಾಯಕ ಅವರು ಮಾತನಾಡುತ್ತಾ, ಮಲ್ಲೇಶಪ್ಪ ಅವರು ಅತ್ಯಂತ ಆತ್ಮೀಯರಾಗಿದ್ದರು. ಪಕ್ಷದ ಸಂಘಟನೆಯಲ್ಲಿ ಅತ್ಯುತ್ತಮವಾಗಿ ಪಾತ್ರ ನಿರ್ವಹಿಸುತ್ತಿದ್ದರು. ನಗರಸಭೆ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುವ ಮೂಲಕ ರಾಜಕೀಯವಾಗಿ ಪಕ್ಷಕ್ಕೆ ಶಕ್ತಿಯಾಗಿದ್ದರು. ಕೊರೊನಾ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ನಿಯಮಗಳನ್ನು ಪಾಲಿಸಬೇಕು. ರಾಯಚೂರಿಗೆ ಅಗತ್ಯವಾಗಿರುವ ಆಂಬ್ಯುಲೆನ್ಸ್‌ವೊಂದನ್ನು ಒದಗಿಸುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಮಾಜಿ ಶಾಸಕ ಹಾಗೂ ಮುನ್ನೂರುಕಾಪು ಸಮಾಜದ ಅಧ್ಯಕ್ಷರಾದ ಎ.ಪಾಪಾರೆಡ್ಡಿ ಮಾತನಾಡುತ್ತಾ, ದೊಡ್ಡ ಮಲ್ಲೇಶಪ್ಪ ಅವರ ಆತ್ಮಶಾಂತಿ ಮತ್ತು ಸಾಮಾಜಿಕ ಸೇವೆಗಳ ಸ್ಮರಣಾರ್ಥವಾಗಿ ಅವರ ಕುಟುಂಬದವರು ಉಚಿತ ಆರೋಗ್ಯ ಶಿಬಿರ ನಿರ್ವಹಿಸುತ್ತಿದ್ದಾರೆ. ಈ ಕಾರ್ಯಕ್ರಮ ಅತ್ಯಂತ ಜನೋಪಯೋಗಿಯಾಗಿದ್ದು, ಇಂತಹ ಕಾರ್ಯಕ್ರಮ ಮೂಲಕ ದೊಡ್ಡ ಮಲ್ಲೇಶಪ್ಪ ಅವರು ಚಿರಕಾಲ ಜನರ ಮನಸ್ಸಿನಲ್ಲಿ ಉಳಿಯಲು ಕಾರಣವಾಗುತ್ತದೆ. ಈ ಕಾರ್ಯಕ್ರಮಕ್ಕೆ ಮಂತ್ರಾಲಯದ ಪೀಠಾಧಿಪತಿಗಳು ಆಗಮಿಸಿರುವುದು ಮತ್ತೊಂದು ವಿಶೇಷವಾಗಿದೆ.
ಮಲ್ಲೇಶಪ್ಪ ಅವರ ಕುಟುಂಬದಿಂದ ಸತತ ನಾಲ್ಕು ಸಲ ನಗರಸಭೆ ಪ್ರತಿನಿಧಿಸುವ ಪ್ರಮುಖ ರಾಜಕೀಯ ಶಕ್ತಿಯಾಗಿದೆ. ಇಂತಹ ಉತ್ತಮ ಕಾರ್ಯಗಳ ಮೂಲಕ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಮಲ್ಲೇಶಪ್ಪ ಅವರು ಚಿಕ್ಕ ವಯಸ್ಸಿನಲ್ಲಿಯೇ ಅಗಲಿದ್ದಾರೆ. ದೊಡ್ಡ ಮಲ್ಲೇಶಪ್ಪ ಅವರು ರಾಜಕೀಯ ಆಕಾಂಕ್ಷಿಗಳಾಗಿದ್ದರು.
ರಾಯಚೂರು ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ ಗೆಲ್ಲುವ ಆಸೆಯನ್ನು ಹೊಂದಿದವರಾಗಿದ್ದರು.
ಆದರೆ, ಅವರು ಸಣ್ಣ ವಯಸ್ಸಿನಲ್ಲಿ ಅಕಾಲಿಕ ಮರಣ ಹೊಂದಿದಂತಹ ಘಟನೆ ದಿಗ್ಭ್ರಮೆಗೊಳ್ಳುವಂತೆ ಮಾಡಿತ್ತು. ದೊಡ್ಡ ಮಲ್ಲೇಶಪ್ಪ ಅವರು ಧೈರ್ಯಸ್ಥರಾಗಿದ್ದರು. ಯಾವುದೇ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಾರ್ಯಕ್ರಮ ಯಶಸ್ವಿಗೆ ಧೈರ್ಯದಿಂದ ಜವಾಬ್ದಾರಿ ವಹಿಸಿಕೊಳ್ಳುವಂತಹ ನಾಯಕರು. ಇವರನ್ನು ಕಳೆದುಕೊಂಡು ನಮ್ಮ ಸಮಾಜ ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಸ್ಮರಣಾರ್ಥ ಇನ್ನೂ ಹೆಚ್ಚಿನ ಚಟುವಟಿಕೆ ನಡೆಯಲಿ ಎಂದು ಹೇಳಿದರು.
ಈ ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಎನ್.ಶಂಕ್ರಪ್ಪ, ನಗರಸಭೆ ಅಧ್ಯಕ್ಷ ಈ.ವಿನಯಕುಮಾರ, ಜಿ.ಬಸವರಾಜ ರೆಡ್ಡಿ, ಅರುಣಾ, ನಗರಸಭೆ ಸದಸ್ಯರಾದ ಸರೋಜಮ್ಮ ದೊಡ್ಡ ಮಲ್ಲೇಶಪ್ಪ, ಸಹೋದರರಾದ ಸಣ್ಣ ಮಲ್ಲೇಶಪ್ಪ, ಭೀಮರೆಡ್ಡಿ, ಲಿಂಗಾರೆಡ್ಡಿ, ನರಸರೆಡ್ಡಿ, ಕೇಶವರೆಡ್ಡಿ, ಎನ್.ಶ್ರೀನಿವಾಸ ರೆಡ್ಡಿ, ಮಹೇಂದ್ರ ರೆಡ್ಡಿ, ಗೋವಿಂದ ರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.