VOJ ನ್ಯೂಸ್ ಡೆಸ್ಕ್ : ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಭ್ರಷ್ಟಾಚಾರದ ಮಸಿ ಮೆತ್ತಿದೆ. ಬೇನಾಮಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿರುವ ವಿವಿಧ ಪ್ರಕರಣಗಳ ಸಂಬಂಧ ರಾಜ್ಯ ಸರ್ಕಾರ ಇಬ್ಬರು ಜಿಲ್ಲಾ ವ್ಯವಸ್ಥಾಪಕರು ಸೇರಿ 8 ಅಧಿಕಾರಿಗಳನ್ನು ಅಮಾನತು ಮಾಡಿ, ಐವರು ಸಿಬ್ಬಂದಿಯನ್ನು ಬೇರೆ ಕಡೆಗೆ ಎತ್ತಂಗಡಿ ಮಾಡಿದೆ.
2019-20, 2020-21ರ ಅವಧಿಯಲ್ಲಿನ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ನಡೆದ ಅಕ್ರಮಗಳ ಬಗ್ಗೆ 2021-22ರಲ್ಲಿ ನಿಗಮದ ಕೇಂದ್ರ ಕಚೇರಿ ಮೂಲಕ ತಪಾಸಣೆ ಕೈಗೊಳ್ಳಲಾಗಿತ್ತು.
1) ನಿಗಮದ ರಾಯಚೂರು ಜಿಲ್ಲಾ ಕಚೇರಿಯಲ್ಲಿ ಯೋಜನೆಯೊಂದಕ್ಕೆ ಸಂಬಂಧಿಸಿದಂತೆ ಅಕ್ರಮ ದಾಖಲೆ ಸೃಷ್ಟಿಸಿ ಬೇನಾಮಿ ಖಾತೆಗಳಿಗೆ 55 ಲಕ್ಷ ರೂ. ಬಿಡುಗಡೆ ಮಾಡಲಾಗಿತ್ತು. ಈ ಸಂಬಂಧ ಕೇಂದ್ರ ಕಚೇರಿಗೆ ದೂರು ದಾಖಲಾಗಿತ್ತು. ಬಳಿಕ ಕೇಂದ್ರ ಕಚೇರಿ ತಪಾಸಣೆ ತಂಡ, ರಾಯಚೂರು ಜಿಲ್ಲಾ ಕಚೇರಿಗೆ ಭೇಟಿ ನೀಡಿ ತನಿಖೆ ನಡೆಸಿ ಹಣ ದುರುಪಯೋಗ ಮತ್ತು ಕಡತಗಳ ನಾಪತ್ತೆ ಸೇರಿ ಅಕ್ರಮಗಳ ನಡೆದಿರುವುದನ್ನು ಪತ್ತೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾ ವ್ಯವಸ್ಥಾಪಕ ಈಶ್ವರಪ್ಪ ಕಟ್ಟಿಮನಿ ಹಾಗೂ ತಾಲೂಕು ಅಭಿವೃದ್ಧಿ ಅಧಿಕಾರಿ ಶರಣಪ್ಪನನ್ನು ಸೆಸ್ಪಂಡ್ ಮಾಡಲಾಗಿದೆ.
2) ಕಲಬುರಗಿ ಜಿಲ್ಲಾ ಕಚೇರಿಯಲ್ಲಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಬ್ಯಾಂಕ್ ಚೆಕ್ ಮತ್ತು ಆರ್ಟಿಜಿಎಸ್ಗಳನ್ನು ಬೇನಾಮಿ ವ್ಯಕ್ತಿಗಳ ಮೂಲಕ ನಗದು ಮಾಡಿಕೊಳ್ಳಲು ಪ್ರಯತ್ನಿಸಿದ್ದ ಪ್ರಕರಣ ಸಂಬಂಧ ಬ್ಯಾಂಕ್ ಅಧಿಕಾರಿಗಳು ನಿಗಮಕ್ಕೆ ಮೌಖಿಕ ದೂರು ನೀಡಿದ್ದರು. ಇದನ್ನು ಆಧರಿಸಿ ಕೇಂದ್ರ ಕಚೇರಿಯ ತಪಾಸಣಾ ತಂಡ ಸಾಂಸ್ಥಿಕ ಕೋಟಾದಡಿ ಮಂಜೂರಾಗಿರುವ ಹೈನುಗಾರಿಕೆ ಮತ್ತು ಐರಾವತ ಯೋಜನೆಗಳ ಹಣವನ್ನು ನಕಲಿ ದಾಖಲೆ ಸೃಷ್ಟಿಸಿ ಬೇನಾಮಿ ಖಾತೆಗಳಿಗೆ ಲಕ್ಷಾಂತರ ರೂ.ಹಣ ವರ್ಗಾ ಮಾಡಿಕೊಂಡಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ ಮುನಾವರ್ ದೌಲ ಮತ್ತು ಹೆಚ್ಚುವರಿ ತಾಲೂಕು ಅಭಿವೃದ್ಧಿ ಅಧಿಕಾರಿ ದೇವರಾಜ್ನನ್ನು ಅಮಾನತು ಮಾಡಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ಗುತ್ತಿಗೆ ನೌಕರರಾದ ವಿಜಯಕುಮಾರ್, ಚೇತನ್ ಎಂಬುವವರನ್ನು ವರ್ಗಾವಣೆ ಮಾಡಲಾಗಿದೆ.