ಇಂದು ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿ ಪುಲೆ ಜನುಮ ದಿನ
Voice Of Janata DESK : ಸಮಾಜ ಸುಧಾರಕಿ, ದೇಶದ ಪ್ರಥಮ ಶಿಕ್ಷಕಿಯರಲ್ಲೊಬ್ಬರಾದ ಸಾವಿತ್ರಿಬಾಯಿ ಫುಲೆ 1831ರ ಜ.3ರಂದು ಮಹಾರಾಷ್ಟ್ರದ ನೈಗಾಂವ್ ಗ್ರಾಮದಲ್ಲಿ ಜನಿಸಿದರು. ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಸಾವಿತ್ರಿಬಾಯಿ ಫುಲೆಯವರು ದೇಶದ ಸ್ತ್ರೀವಾದಿ ಚಳವಳಿಯ ಹರಿಕಾರರಲ್ಲೊಬ್ಬರು. ಪತಿ ಜ್ಯೋತಿಬಾ ಫುಲೆ ಅವರ ಜತೆಗೂಡಿ ಸಾವಿತ್ರಿಬಾಯಿ ಪುಲೆಯವರು ಪುಣೆಯಲ್ಲಿ 1848ರಲ್ಲಿ ದೇಶದ ಮೊದಲ ಬಾಲಕಿಯರ ಶಾಲೆ ತೆರೆದರು. ಜಾತಿಭೇದ ಮತ್ತು ಲಿಂಗಾಧಾರಿತ ಅಸಮಾನತೆ ನಿಗ್ರಹಕ್ಕೆ ಅವರು ತಮ್ಮ ಜೀವನ ಮುಡಿಪಾಗಿಟ್ಟರು. ಸಾವಿತ್ರಿಬಾಯಿ ಫುಲೆಯವರ ನಿಲುವುಗಳು ಮತ್ತು ಅವರ ಸುಧಾರಣಾ ಕಾರ್ಯಗಳು ಅಂದಿನ ಸಾಮಾಜಿಕ ವ್ಯವಸ್ಥೆಗೆ ವಿರುದ್ಧವಾಗಿದ್ದರಿಂದ ಸ್ಥಳೀಯರ ವಿರೋಧವನ್ನು ಎದುರಿಸಬೇಕಾಗಿ ಬಂದಿತು. ಅನೇಕ ವೇಳೆ ವಿರೋಧಿಗಳು ಕೇವಲ ಬೈಗುಳಗಳಲ್ಲದೆ ಸಗಣಿ, ಕಲ್ಲುಗಳನ್ನು ಅವರ ಮೇಲೆ ಎಸೆಯುತ್ತಿದ್ದರು. ಇದರಿಂದಾಗಿ ಸಾವಿತ್ರಮ್ಮನವರು ತಮ್ಮ ಚೀಲದಲ್ಲಿ ಸದಾ ಕಾಲ ಸೀರೆಯೊಂದನ್ನು ಇಟ್ಟುಕೊಳ್ಳುತ್ತಿದ್ದರು. ಅವರು 1897ರ ಮಾ.10ರಂದು ನಿಧನರಾದರು.