ಮಸ್ಕಿ: ತಾಲೂಕಿನ ವಟಗಲ್ ಗ್ರಾಮದಲ್ಲಿ ಹಳೆಯ ಕಾಲದ ಮೂರು ಶಾಸನಗಳು ದೊರೆತಿವೆ. ಇಲ್ಲಿ ಪತ್ತೆಯಾದ ಮೂರು ಶಾಸನಗಳು ಕನ್ನಡ ಭಾಷೆ ಮತ್ತು ಕನ್ನಡ ಲಿಪಿಯಲ್ಲಿವೆ. ಗ್ರಾಮದ ಮಾರುತಿ ದೇವಾಲಯದ ಆವರಣದಲ್ಲಿ ಎರಡು ಕಪ್ಪು ಶಿಲೆಯ ಶಾಸನಗಳಿವೆ. ಇವುಗಳಲ್ಲಿ ಒಂದು ಶಾಸನ ಏಳು ಹೆಡೆಯ ನಾಗ ಶಿಲ್ಪದ ಎಡ ಬದಿಯಲ್ಲಿದ್ದು, 23 ಸಾಲುಗಳಿಂದ ರಚಿತಗೊಂಡಿದೆ.
ಇದು ಕ್ರಿ.ಶ 12 ನೇತಮಾನಕ್ಕೆ ಸೇರಿದ್ದಾಗಿದ್ದು, ಕಲ್ಯಾಣಿ ಚಾಳುಕ್ಯ ನಾಲ್ಕನೇ ಸೋಮೇಶ್ವರನು (ಕ್ರಿ.ಶ 144-1961 ರಾಜ್ಯಭಾರ ಮಾಡುತ್ತಿರುವಾಗ ಈತನ ಮಹಾಮಂಶ್ವರನಾಗಿ ವಟಗಲ್ ಸುತ್ತಮುತ್ತಲಿನ ಪ್ರದೇಶವನ್ನು ಹೊಲ್ಲರಸ ಎಂಬಾತನು ಆಳ್ವಿಕೆ ಮಾಡುತ್ತಿದ್ದನು. ಈ ಶಾಸನದ ಆರಂಭದಲ್ಲಿ ಶ್ರೀ ಮತ್ತು ಮೊಟ್ಟುಗಲ್ಲ ಗ್ರಾಮವೆಂದು ಅರಂಭಿಸಿ ಇಲ್ಲಿನ ಕಲಿದೇವರಿಗೆ ಕಬ್ಬದೇವಿ ಎಂಬಾಕೆಯು ದಾನ ನೀಡಿದಳು ಹಾಗೆಯೇ ಶಾಸನ ಮುಂದುವರಿದು ‘ನಾಗವರ್ಮರಸ ಮತ್ತು ನಾಗರಸರಂಬವವರ ಉಲ್ಲೇಖಗೊಂಡಿದ್ದು, ಇವರ ಕೆಲಸ ಕಾರ್ಯಗಳೇನೆಂಬುದು ತಿಳಿಯುತ್ತಿಲ್ಲ.
ಎರಡನೇ ಶಾಸನವು ಹನುಮಂತ ದೇವಾಲಯದ ಆವರಣದಲ್ಲಿದ್ದು, ಇದರ ಮೇಲ್ಬಾಗದಲ್ಲಿ ಸೂರ್ಯ,ಚಂದ್ರ, ನಂದಿ, ಕಾಳಾಮುಖಮುನಿ, ಖಡ್ಗದ ಶಿಲ್ಪಗಳಿವೆ. ಇದರ ಕೆಳ ಬದಿಯಲ್ಲಿ ಐದು ಸಾಲುಗಳಲ್ಲಿ ಕೆಲವೇ ಅಕ್ಷರಗಳು ಕಾಣ ಬರುತ್ತವೆ. ಇದರಲ್ಲಿ ಕಲ್ಯಾಣಿ ಚಾಲುಕ್ಯ ಅರಸ ಅರನೇ ವಿಕ್ರಮಾದಿತ್ಯನ ಉಲ್ಲೇಖವು ಮಾತ್ರ ಕಂಡು ಬರುತ್ತಿದ್ದು, ಶಾಸನದ ಮುಕ್ಕಾಲು ಭಾಗದ ಅಕ್ಷರಗಳು ಸವೆದು ಹೋಗಿವೆ.
ಇನ್ನು ಮೂರನೇ ಶಾಸನವು ಈಶ್ವರ ದೇವಾಲಯದ ಹತ್ತಿರದ (ಪೂರ್ವ) ಕಣಶಿಲೆಯ ಹುಟ್ಟು ಬಂಡಗಲ್ಲಿಗೆ ಅಸ್ಪಷ್ಟವಾಗಿ ಬರೆಸಲಾಗಿದ್ದು, ಇದು ಕ್ರಿ.ಶ 18-19 ನೇ ಶತಮಾನಕ್ಕೆ ಸೇರುತ್ತದೆ, ಇದರಲ್ಲಿ ಮೊರಬ(ಪ್ರಸ್ತುತ ಮಲ್ಲಟ ಗ್ರಾಮ)ದ ಹೊಲವನ್ನು ಮಾನ್ಯ ಮಾಡಿದ ಬಗ್ಗೆ ದಾಖಲಿಸುತ್ತದೆ. ಹಾಗೆಯೇ ಈ ಶಾಸನಕ್ಕೆ ಯಾರಾದರೂ ದಕ್ಕೆ ಮಾಡಿದರೆ ಕೇಡಾಗುತ್ತದೆ ಎಂದು ಶಾಪಾಶಯ ಹಾಕಿಸಲಾಗಿದೆ.
ಇಲ್ಲಿನ ಶಾಸನಗಳ ಕ್ಷೇತ್ರ ಕಾರ್ಯದಲ್ಲಿ ಪಾಮನಕಲ್ಲೂರು ಗ್ರಾಮದ ಚನ್ನಪ್ಪ ಕನ್ನಡ, ಅಯ್ಯಪ್ಪ ಉಪನ್ಯಾಸಕರುಗಳು, ವಟಗಲ್ ಗ್ರಾಮದ ವೆಂಕನಗೌಡ ಪಾಟೀಲ, ಬಗವಂತ್ರಾಯ, ಅಮರೇಶ ಬಡಿಗೇರ ಹಾಗೂ ತಿಮ್ಮಣ್ಣ, ಕಾಚಾಪುರ ಮೊದಲಾದವರು ನೆರವಾಗಿದ್ದರೆಂದು ಸಂಶೋಧಕ ಹಾಗೂ ಇತಿಹಾಸ ಉಪನ್ಯಾಸಕ, ಡಾ: ಚನ್ನಬಸಪ್ಪ ಮಲ್ಕಂದಿನ್ನಿಯವರು ತಿಳಿಸಿದ್ದಾರೆ.