ಜಗತ್ತು ಭಗವಂತನನ್ನು ಕಂಡಿಲ್ಲ ಆದರೆ..?
ವಿಜಯಪುರ : ಜಗತ್ತು ಭಗವಂತನನ್ನು ಕಂಡಿಲ್ಲ, ಆದರೆ ನಾವುಗಳು ಶ್ರೀ ಸಿದ್ದೇಶ್ವರ ಅಪ್ಪಗಳ ರೂಪದಲ್ಲಿ ಭಗವಂತನನ್ನು ಕಂಡಿದ್ದೇವೆ ಎಂದು ವಿಧಾನ ಪರಿಷತ್ ಶಾಸಕ ಹಣಮಂತ ನಿರಾಣಿ ಹೇಳಿದರು.
ನಗರದ ಜ್ಞಾನಯೋಗಾಶ್ರಮದಲ್ಲಿ ಪ್ರತಿ ಹುಣ್ಣಿಮೆಯ ದಿನ ನಡೆಯುವ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶ್ರೀ ಸಿದ್ದೇಶ್ವರ ಅಪ್ಪಗಳು ಮನುಕುಲದ ಬದುಕು ಬದಲಾಯಿಸು ಪ್ರವಚನ ನೀಡಿದರು. ಆ ಭಗವಂತ ಕಾಲಕಾಲಕ್ಕೆ ರೂಪಾತಾಳಿ ಜಗತ್ತನ್ನು ಬೆಳಗಿಸಲು ಬರುವ ಹಾಗೆ ಅಪ್ಪಗಳು ಬಂದು ನಮ್ಮ ಬದುಕು ಪಾವನಗೊಳಿಸಿದರು.
ಶಿಕ್ಷಣದ ಬಗ್ಗೆ ಅಪ್ಪಗಳು ಅಪಾರ ಪ್ರೀತಿ ಹೊಂದಿದ್ದು ಶಿಕ್ಷಣದಿಂದ ಜನರ ಮನಸ್ಸು ಬದಲಾಯಿಸುವ ಶಕ್ತಿ ಇದೆ ಎಂದು ನಮಗೆಲ್ಲ ಹೇಳುತ್ತಿದ್ದರು. ಧರ್ಮ, ಸಮಾಜ ಜಗತ್ತಿನ ಬಗ್ಗೆ ಅಪಾರ ಪ್ರೇಮ ಹೊಂದಿದ್ದ ಅಪ್ಪಗಳು ನಿಸರ್ಗವನ್ನು ಆರಾಧಿಸಿದರು. ಸಾಹಿತಿಗಳಿಗೆ, ಬರಹಗಾರರಿಗೆ ಉತ್ತಮ ವಿಚಾರಗಳನ್ನು ಬರೆಯಬೇಕು. ಪುಸ್ತಕ ಕೇವಲ ಓದುವುದಕ್ಕಲ್ಲ ಓದುಗನ ಬದುಕು ಬೆಳಗಲಿಕ್ಕೆ, ಜೀವನ ಬದಲಿಸಲಿಕ್ಕೆ ಬರೆಯಿರಿ ಎಂದು ಹೇಳುತ್ತಿದ್ದರು. ಪೂಜ್ಯರ ಮಾತು ಜ್ಞಾನದ ಜ್ಯೋತಿ ಇದ್ದಂತೆ ಅದು ನಿರಂತರವಾಗಿ ಬೆಳಗುತ್ತದೆ ಎಂದರು.
ಬಿಜೆಪಿ ಮುಖಂಡ ಸುರೇಶ ಬಿರಾದಾರ ಮಾತನಾಡಿ, ಸಿದ್ದೇಶ್ವರ ಅಪ್ಪಗಳ ಮಾತುಗಳನ್ನು ಕೇಳಲು ದೇಶ ವಿದೇಶಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿತ್ತು ಅಂತಹ ಅದ್ಭುತ ಶಕ್ತಿ ಅಪ್ಪಗಳಿಗೆ ಇತ್ತು ಎಂದು ಹೇಳಿದರು.
ನಮ್ಮ ಶಿಕ್ಷಣ ಸಂಸ್ಥೆ ಉದ್ಘಾಟನೆ ಮಾಡಿದವರು ಸಿದ್ದೇಶ್ವರ ಅಪ್ಪಗಳು. ಅಂದು ಪ್ರಾರಂಭವಾದ ಶಾಂತಿನಿಕೇತನ ಶಿಕ್ಷಣ ಸಂಸ್ಥೆ ಇಂದು ಎತ್ತರಕ್ಕೆ ಬೆಳೆದಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದರು.
ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಮಹಾಸ್ವಾಮೀಜಿಗಳು ಹಾಗೂಜಮಖಂಡಿ ಹುಲ್ಯಾಳ ಆಶ್ರಮದ ಶ್ರೀ ಹರ್ಷಾನಂದ ಸ್ವಾಮೀಜಿ ಮಾತನಾಡಿದರು.
ಜ್ಞಾನಯೋಗಾಶ್ರಮದ ಶ್ರದ್ಧಾಂನಂದ ಸ್ವಾಮೀಜಿ ಮಾತನಾಡಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಎಲ್ಲರೂ ತಣ್ಣಗೆ ಇರ್ರಿ ಎಂದು ಹೇಳುತ್ತಿದ್ದರು. ಅಪ್ಪಗಳ ಪ್ರವಚನಗಳನ್ನು ಕೇಳಿ ನಮ್ಮ ಕಿವಿಗಳು ಪಾವನಗೊಂಡಿವೆ, ಅವರು ನಡೆದಾಡಿದ ಈ ಭೂಮಿ ಪಾವನಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಶ್ರದ್ದಾನಂದ ಸ್ವಾಮೀಜಿ, ಬಸವಪ್ರಸಾದ ಸ್ವಾಮೀಜಿ, ಗಣೇಶಾನಂದ ಸ್ವಾಮೀಜಿ, ಆಶ್ರಮದ ಕಾರ್ಯದರ್ಶಿ ಎಂ.ಜಿ.ಹಳ್ಳದ, ಶಿವಾನಂದ ಸಂಖ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
















