ಚಾಲಕರ ಕಾರ್ಯ ಅನುಪಮ ಹಾಗೂ ಮಹತ್ವದ್ದಾಗಿದೆ
-ವಸೀಂಬಾಬಾ ಮುದ್ದೇಬಿಹಾಳ
ವಿಜಯಪುರ, ಜ.24 : ಚಾಲಕರಿಗೆ ನೈತಿಕ ಸ್ಥೈರ್ಯ ತುಂಬುವ ಹಾಗೂ ಅವರ ಜವಾಬ್ದಾರಿಯುತ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಜನವರಿ 24ರಂದು ಚಾಲಕರ ದಿನ ಆಚರಣೆ ಮಾಡಲಾಗುತ್ತಿದ್ದು, ಪ್ರಯಾಣಿಕರ ಸುರಕ್ಷತೆಯೊಂದಿಗೆ ಪ್ರಯಾಣಿಕರ ನಂಬಿಕೆ ಗಳಿಸಿ, ಸೇವೆ ಸಲ್ಲಿಸುತ್ತಿರುವ ಚಾಲಕರ ಕಾರ್ಯ ಅತ್ಯಂತ ಮಹತ್ವದ್ದಾಗಿದ್ದು,ಅವರ ಕಾರ್ಯ ಜವಾಬ್ದಾರಿಯುತ ಮತ್ತು ಗೌರವಯುತ ಸೇವೆಯಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ವಸೀಂಬಾಬಾ ಮುದ್ದೇಬಿಹಾಳ ಅವರು ಹೇಳಿದರು.
ಅವರು,ಕೇಂದ್ರ ಬಸ್ ನಿಲ್ದಾಣದಲ್ಲಿ ಶನಿವಾರ ನಡೆದ ಚಾಲಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಕರ್ತವ್ಯದ ಅವಧಿಯಲ್ಲಿ ಮೈತುಂಬಾ ಕಣ್ಣಾಗಿಸಿಕೊಂಡು ಪ್ರಯಾಣಿಕರ ಸುರಕ್ಷತೆಯನ್ನು ಆದ್ಯತೆಯನ್ನಾಗಿಸಿಕೊಂಡು ನಿರ್ವಹಿಸುವ ಕಾರ್ಯ ಅನುಪಮವಾಗಿದೆ ಎಂದು ಅವರು ಹೇಳಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ನಾರಾಯಣಪ್ಪ ಕುರುಬರ ಅವರು ಮಾತನಾಡಿ,
ಚಾಲಕರ ದಿನಾಚರಣೆ ಸಂದರ್ಭದಲ್ಲಿ ಚಾಲಕರಿಗೆ ಸನ್ಮಾನ, ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಹಮ್ಮಿಕೊಂಡು ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕವಿಮಾ ಸೌಲಭ್ಯಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕರ್ನಾಟಕ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಚಾಲಕರಿಗೆ ಗೌರವಿಸಲಾಗುತ್ತಿದೆ .
ಈ ಬಾರಿ ವಿಜಯಪುರ ವಿಭಾಗದ 24 ಚಾಲನಾ ಸಿಬ್ಬಂದಿಗಳನ್ನು ಆಯ್ಕೆ ಮಾಡಲಾಗಿದ್ದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ನಿಗಮದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಅಧಿಕಾರಿಗಳು ಸನ್ಮಾನಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿಜಯಪುರ ವಿಭಾಗದ ಎಂಟು ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 2419 ಚಾಲನಾ ಸಿಬ್ಬಂದಿಗಳಿಗೆ ಚಾಲಕರ ದಿನಾಚರಣೆ ಪ್ರಯುಕ್ತ ಅಭಿನಂದನೆ ಸಲ್ಲಿಸಲಾಗುತ್ತದೆ. ಸಾರ್ವಜನಿಕರು ಹಾಗೂ ಕುಟುಂಬದ ಸದಸ್ಯರೂ ಸಹ ಚಾಲಕರಿಗೆ ಶುಭಾಶಯಗಳನ್ನು ಕೋರಿದ್ದಾರೆ. ದಿನನಿತ್ಯ ವಾಹನಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರಿಗೂ ಸುರಕ್ಷಿತ ಪ್ರಯಾಣವನ್ನು ಒದಗಿಸುವ ಜವಾಬ್ದಾರಿ ಚಾಲಕರ ಮೇಲಿದೆ. ಆದ್ದರಿಂದ ಈ ದಿನ ಚಾಲಕರಿಗೆ ಅಭಿನಂದನೆ ಸಲ್ಲಿಸುವ ದಿನವಾಗಿದೆ.
ವಿಜಯಪುರ ವಿಭಾಗದಲ್ಲಿ ಕಾಲಕಾಲಕ್ಕೆ ಚಾಲಕರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಚಾಲಕರ ಮೇಲಿನ ವಿಶ್ವಾಸಾರ್ಹತೆಯೇ ಚಾಲಕರಿಗೆ ಮನೋಸ್ಥೈರ್ಯ ಹೆಚ್ಚಾಗಿದೆ.
ಮಾರ್ಗದಲ್ಲಿ ಸಮಚಿತ್ತದಿಂದ, ಯಾವುದೇ ಉದ್ವೇಗಕ್ಕೆ ಒಳಗಾಗದೇ ವಾಹನ ಚಾಲನೆ ಮಾಡುವ ಚಾಲಕರಿಗೆ ಅವರ ಗುರುತರ ಸೇವೆಯನ್ನು ಗುರುತಿಸಿ ಅಪಘಾತರಹಿತ ಸೇವೆಗೆ ಪ್ರತಿಯಾಗಿ ಪುರಸ್ಕಾರ ನೀಡಲಾಗುತ್ತಿದ್ದು, ಇತರ ಚಾಲಕರಿಗೂ ಪ್ರೇರಣೆಯೂ ಆಗಿದೆ. ಚಾಲಕರ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದ್ದು, ಅವರ ಸಮರ್ಪಿತ ಸೇವೆಯನ್ನು ಮುಕ್ತ ಕಂಠದಿಂದ ಪ್ರಶಂಸಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದಿಂದ ಎಸ್.ಎಸ್.ಲಮಾಣಿ, ಕೆ.ಜಿ.ಬಿರಾದಾರ, ಸಂಗನಬಸಪ್ಪ ಹೊಲ್ಲೂರ, ಅಶೋಕ ಕಪಾಲಿ, ಶಂಕ್ರಪ್ಪ ನಾಟೀಕಾರ, ವಿ.ಎಸ್.ಹೊಳಿ, ಎಮ್.ಆಯ್.ಅಲಾಳಮಠ, ಡಿ.ಪಿ.ಗೊಳಸಂಗಿ, ಎಮ್.ಎಸ್.ಬಿರಾದಾರ, ಡಿ.ಎಲ್.ಪವಾರ, ಎಮ್.ಎನ್.ಸಂಖದ, ಎಮ್.ಡಿ.ಚಿವಟೆ, ಶ್ರೀಶೈಲ್ ಕೊಟರಗಸ್ತಿ, ಆರ್.ಜೆ.ಮಾದಾಪೂರ, ಎಸ್.ಎಮ್.ಹಿರೇಮಠ, ಜಿ.ಜಿ.ಕುಲಕರ್ಣಿ, ಎಸ್.ಬಿ.ನಾಯಕ, ಆರ್.ವಾಯ್.ಬಿರಾದಾರ, ಎಸ್.ಡಿ.ಚವ್ಹಾಣ, ಅಬ್ಬಾಸಲಿ ಮುಲ್ಲಾ, ರಮೇಶ ಚೆಟ್ಟರ, ಬಿ.ಎಮ್.ಬಡಿಗೇರ, ಎಮ್.ಎಸ್.ಮೇಟಿ, ಆರ್.ಎಚ್.ಪಾಟೀಲ ಸನ್ಮಾನಕ್ಕೆ ಭಾಜನರಾಗಿದ್ದಾರೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಾರ್ತಾಧಿಕಾರಿ ಅಮರೇಶ ದೊಡಮನಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮಲ್ಲಿಕಾರ್ಜುನ ಬಿರಾದಾರ, ನಿಗಮದ ವಿಭಾಗೀಯ ತಾಂತ್ರಿಕ ಶಿಲ್ಪಿ ವೆಂಕಟೇಶ, ಸಹಾಯಕ ಸಂಚಾರ ವ್ಯವಸ್ಥಾಪಕರಾದ ಜೆ.ಕೆ.ಹುಗ್ಗೆನವರ, ನಿಗಮದ ವಿಭಾಗೀಯ ಕಾರ್ಯ ಅಧೀಕ್ಷಕರಾದ ಶ್ರೀಮತಿ ಮೇಘಾ ಕುಂಬಾರ, ಕಾರ್ಮಿಕರ ಕಲ್ಯಾಣಾಧಿಕಾರಿಗಳಾದ ಶ್ರೀಮತಿ ದಿಲ್ ಶಾದ್ ಜಮಾದಾರ, ಘಟಕ ವ್ಯವಸ್ಥಾಪಕರಾದ ಎಸ್.ಬಿ.ಬಿರಾದಾರ ಸೇರಿದಂತೆ ಚಾಲಕರು, ನಿರ್ವಾಹಕರು, ಪ್ರಯಾಣಿಕರು ಉಪಸ್ಥಿತರಿದ್ದರು.


















