ವಚನಗಳ ಸಂರಕ್ಷಕ ಡಾ.ಫ ಗು ಹಳಕಟ್ಟಿ-ಸಂತೋಷ ಬಂಡೆ
ಇಂಡಿ: ‘ಡಾ.ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯ ಸಂರಕ್ಷಣೆಗೆ ಜೀವನ ಮುಡಿಪಾಗಿಟ್ಟ ಮಹನೀಯರು.ಶರಣರ ಸಾವಿರಾರು ವಚನಗಳನ್ನು ನಾನಾಕಡೆ ಸಂಚರಿಸಿ, ಕಷ್ಟಪಟ್ಟು ಸಂಗ್ರಹಿಸಿ ಇಂದಿನ ಜನರಿಗೆ ಲಭ್ಯವಾಗುವಂತೆ ಮಾಡಿದ ಶ್ರೇಯಸ್ಸು ಡಾ.ಫ ಗು ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಡಾ.ಫ.ಗು.ಹಳಕಟ್ಟಿ ಜನ್ಮದಿನದ ಅಂಗವಾಗಿ ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಲ್ಲಿ ‘ವಚನ ಸಾಹಿತ್ಯ ಸಂರಕ್ಷಣೆ ದಿನಾಚರಣೆ’ಯನ್ನು ಉದ್ದೇಶಿಸಿ ಮಾತನಾಡಿದರು. ‘ವಚನಕಾರರು ವಚನಗಳ ಮೂಲಕ ಜ್ಞಾನದ ಬೆಳಕನ್ನು ಜಗತ್ತಿಗೆ ಬಿತ್ತರಿಸಿ, ಜೀವನಕ್ಕೆ ನೀತಿ ಸಂಹಿತೆ ಹಾಕಿಕೊಟ್ಟು, ಸಮಾನತೆ, ಸಹಬಾಳ್ವೆ, ಭ್ರಾತೃತ್ವ, ಸಹಾನುಭೂತಿಯಂತಹ ಚಿಂತನೆಗಳನ್ನು ಸಾರಿದ್ದಾರೆ. ಆ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದು ಹೇಳಿದರು.
ಶಿಕ್ಷಕ ಎಸ್ ಆರ್ ಚಾಳೇಕರ ಮಾತನಾಡಿ, ಫ.ಗು. ಹಳಕಟ್ಟಿ ಅವರು ಚಿಕ್ಕಂದಿನಲ್ಲಿ ಮಂಚಾಲೆ ಅವರ ಮನೆಗೆ ಹೋಗಿದ್ದಾಗ ತಾಳೆ ಗರಿಯ ವಚನಗಳ ಕಟ್ಟು ನೋಡಿ ಆಕರ್ಷಿತರಾಗಿ ಸಂಗ್ರಹದಲ್ಲಿ ತೊಡಗಿಕೊಂಡರು. ವಚನ ಸಾಹಿತ್ಯದ ಪ್ರಭಾವಕ್ಕೆ ಒಳಗಾದ ಅವರು ವಕೀಲ ವೃತ್ತಿಯನ್ನು ತ್ಯಜಿಸಿ ವಚನ ಸಾಹಿತ್ಯ ಸಂರಕ್ಷಣೆಗೆ ನಿಂತರು’ ಎಂದು ವಿವರಿಸಿದರು.ವಿಜ್ಞಾನ ಶಿಕ್ಷಕಿ ಎಫ್ ಎ ಹೊರ್ತಿ ಮಾತನಾಡಿ, ‘ಮುಂದಿನ ಪೀಳಿಗೆಗೆ ವಚನಗಳನ್ನು ತಲುಪಿಸುವ ನಿಟ್ಟಿನಲ್ಲಿ ವಚನಗಳ ಮುದ್ರಣಕ್ಕೆ ಮುಂದಾದ ಹಳಕಟ್ಟಿ ಅವರು ಮುದ್ರಣಾಲಯವನ್ನು ಸ್ಥಾಪಿಸಿ, ಆರ್ಥಿಕ ಬಿಕ್ಕಟ್ಟು ತಲೆದೋರಿದಾಗ ಮನೆಯನ್ನೇ ಮಾರಾಟ ಮಾಡಿ ಮುದ್ರಣಾಲಯ ಮುನ್ನಡೆಸಿದ್ದು ಸ್ಮರಣೀಯ’ ಎಂದು ಹೇಳಿದರು.
ಕೆಬಿಎಸ್ ಮುಖ್ಯ ಶಿಕ್ಷಕ ಅನಿಲ ಪತಂಗಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕರಾದ ವ್ಹಿ ವೈ ಪತ್ತಾರ, ಎ ಎಂ ಬೆದ್ರೇಕರ ಹಾಗೂ ಶಿಕ್ಷಕರಾದ ಜೆ ಎಂ ಪತಂಗಿ, ಎಸ್ ಎಂ ಪಂಚಮುಖಿ, ಎಸ್ ಡಿ ಬಿರಾದಾರ, ಎಸ್ ಬಿ ಕುಲಕರ್ಣಿ, ಸಾವಿತ್ರಿ ಸಂಗಮದ, ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಎಸ್ ಎನ್ ಡಂಗಿ, ಜೆ ಸಿ ಗುಣಕಿ, ಎಸ್ ವ್ಹಿ ಬೇನೂರ, ಶಾಂತೇಶ ಹಳಗುಣಕಿ, ಸುರೇಶ ದೊಡ್ಯಾಳಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.