ಶಿಕ್ಷಕರ ದಿನಾಚರಣೆ: ಜಿಲ್ಲಾ ಆತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ
ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ
-ಸಂಗಮೇಶ ಬಬಲೇಶ್ವರ
ವಿಜಯಪುರ, ಸೆಪ್ಟಂಬರ್ 5 : ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಪಾತ್ರ ಸಮಾಜದಲ್ಲಿ ಮಹತ್ವದ್ದಾಗಿದ್ದು, ಶಿಕ್ಷಕರ ಕಾರ್ಯ ಅನನ್ಯವಾಗಿದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಹೇಳಿದರು.
ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಾರ್ಯಾಲಯ ಹಾಗೂ ನಗರ ವಲಯ ವಿಜಯಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರ ಸಹಯೋಗದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿ ಪಾಠ ಬೊಧನೆ ಮಾಡುವ ಮೂಲಕ ಮುಂದಿನ ಉತ್ತಮ ನಾಗರಿಕರನ್ನಾಗಿ ರೂಪಿಸುವ ಬಹು ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮಕ್ಕಳ ಅಂತರಾಳವನ್ನು ಅರಿತು, ಪರಿಣಾಮಕಾರಿಯಾಗಿ ಬೋಧನೆ ಮಾಡುವ ಮೂಲಕ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಿಷಿ ಆನಂದ ಅವರು ಮಾತನಾಡಿ, ಗುರು ಶಿಷ್ಯ ಪರಂಪರೆ ಪ್ರಾಚೀನ ಕಾಲದಿಂದಲೂ ಇದೆ. ಗುರುವನ್ನು ದೇವರನ್ನಾಗಿ ಕಾಣುವ ದೇಶ ನಮ್ಮದು. ದೇಶದ ಭವಿಷ್ಯ ಎಂದು ಮಕ್ಕಳನ್ನು ಕರೆಯುತ್ತೇವೆ. ಅಂತಹ ಮಕ್ಕಳ ಭವ್ಯ ಭವಿಷ್ಯವನ್ನು ರೂಪಿಸಿ ಸುಭದ್ರ ದೇಶ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಬಹುಮುಖ್ಯವಾಗಿದ್ದು, ಮಕ್ಕಳಿಗೆ ಶಿಕ್ಷಕರು ತತ್ವಜ್ಞಾನಿಯಾಗಿ ಮಾರ್ಗದರ್ಶಕರಾಗಿ ಅವರ ಸುಂದರ ಕನಸಿಗೆ ಪ್ರೇರಣಾದಾಯಕವಾಗಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಶಿಕ್ಷಣದಿಂದ ನಮಗೆ ಜ್ಞಾನ, ಆತ್ಮವಿಶ್ವಾಸ, ಕೌಶಲ, ತಿಳುವಳಿಕೆ, ಅರಿವು ಮೂಡುತ್ತದೆ. ಶಿಕ್ಷಣ ಎಂಬುದು ಬದುಕಿಗೆ ಬಹುಮುಖ್ಯವಾಗಿದ್ದು, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಆಸ್ಥೆ ವಹಿಸಿ, ನಿಯಮಿತವಾಗಿ ವೇಳಾಪಟ್ಟಿ ಹಮ್ಮಿಕೊಂಡು ಮಕ್ಕಳ ಸರ್ವೋತೋಮುಖ ವ್ಯಕ್ತಿತ್ವದ ಬೆಳವಣಿಗೆಗೆ ಜವಾಬ್ದಾರಿಯುತವಾಗಿ ಹಾಗೂ ಅತ್ಯಂತ ಕಾಳಜಿ ಪೂರ್ವಕವಾಗಿ ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು. ಮಕ್ಕಳಿಗೆ ನಿರಂತರ ಪರಿಹಾರ ಬೋಧನೆ ಮಾಡಬೇಕು. ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನಿಡಬೇಕು.ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಕೈಜೋಡಿಸಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, ಶಿಕ್ಷಕರು ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ಶಿಕ್ಷಣ ಗುಣಮಟ್ಟ ಹೆಚ್ಚಿಸುವಲ್ಲಿ ವಿವಿಧ ಶೈಕ್ಷಣಿಕಾ ಕಾರ್ಯಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಎನ್. ಎಚ್. ನಾಗೂರ, ಪ್ರತಿ ವ್ಯಕ್ತಿಯೂ ಗೌರವದಿಂದ ಬದುಕು ನಡೆಸಲು ಗುರುಗಳ ಪಾತ್ರ ಅಪಾರವಾಗಿದೆ. ಆತ್ಮ ಸಂತೋಷÀದಿAದ ಕಾರ್ಯ ನಿರ್ವಹಿಸಿ ಜಿಲ್ಲೆಯ ಶೈಕ್ಷಣಿಗ ಪ್ರಗತಿಗೆ ಕೊಡುಗೆ ನೀಡಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಯ ಮೂರು ವಿಭಾಗದಿಂದ 21 ಜನ ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. 60 ಜನ ನಿವೃತ್ತ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು. 2024-25ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ವತಿಯಿಂದ ಅನುಷ್ಟಾನಗೊಳಿಸುತ್ತಿರುವ ವಿವಿಧ ಕಾರ್ಯಕ್ರಮಗಳ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ವಿಜಯಪುರ ಮಹಾನಗರಪಾಲಿಕೆ ಮಹಾಪೌರರಾದ ಮಹೇಜಬಿನ್ ಹೊರ್ತಿ, ವಿಜಯಪುರ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ, ಶಿಕ್ಷಕರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ, ಭಾರತ ಸೇವಾದಳ ಹಾಗೂ ಸ್ಕೌಟ್ಸ್ ಗೈಡ್ಸ್ ಮಕ್ಕಳು, ಜಿಲ್ಲೆಯ ವಿವಿಧ ತಾಲೂಕಿನಿಂದ ಆಗಮಿಸಿದ ಶಿಕ್ಷಕರು, ಅಧಿಕಾರಿಗಳು ಉಪಸ್ಥಿತರಿದ್ದರು.