ವಿದ್ಯಾರ್ಥಿಯ ಆರೋಗ್ಯಕರ ವಿಕಸನದಲ್ಲಿ ಪುಸ್ತಕಗಳ ಪಾತ್ರ ಅನನ್ಯ: ಎಸ್ ಆರ್ ನಡುಗಡ್ಡಿ
ಇಂಡಿ: ‘ಪುಸ್ತಕ’ ಎಂದರೆ ಜ್ಞಾನ ಭಂಡಾರ. ಅದು ಎಂದೂ ಕರಗದ ಸಂಪತ್ತು.ಅವು ಮನುಷ್ಯನಲ್ಲಿ ಒಳ್ಳೆಯ ವ್ಯಕ್ತಿತ್ವವನ್ನು ಹುಟ್ಟು ಹಾಕಬಲ್ಲವು. ವಿದ್ಯಾರ್ಥಿಯ ಆರೋಗ್ಯಕರ ವಿಕಸನದಲ್ಲಿ ಪುಸ್ತಕಗಳ ಪಾತ್ರ ಅನನ್ಯ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡುಗಡ್ಡಿ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯ ವತಿಯಿಂದ ಹಮ್ಮಿಕೊಂಡ ‘ರೀಡ್ ಎ ಥಾನ್’-ಪುಸ್ತಕ ಓದುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪುಸ್ತಕಗಳನ್ನು ಓದುವುದರಿಂದ ಮಕ್ಕಳಲ್ಲಿ ಭಾಷಾ ಜ್ಞಾನ, ಪದಗಳ ಪರಿಚಯ, ಸಾಹಿತ್ಯದಲ್ಲಿ ಆಸಕ್ತಿ ಬೆಳೆದು, ನೈತಿಕತೆ, ಸೃಜನಶೀಲತೆ ಹಾಗೂ ಪ್ರಬುದ್ಧತೆ ಅರಳಲು ಸಾಧ್ಯವಾಗುತ್ತದೆ. ಭಾಷಾ ಜ್ಞಾನದ ಮೇಲೆ ಮೇಲುಗೈ ಸಾಧಿಸಲು ಇಂದಿನ ಮಕ್ಕಳು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದು ಅತ್ಯವಶ್ಯಕ ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ‘ಪುಸ್ತಕ ತೆರೆದಾಗ ಹೊಸ ಜಗತ್ತು ತೆರೆಯುತ್ತದೆ’ ಎಂಬ ಮಾತಿದೆ. ಪ್ರಾಚೀನ ನಾಗರಿಕತೆಗಳಿಂದಲೂ ಪುಸ್ತಕಗಳು ಮಾನವಕುಲದ ಸ್ನೇಹಿತರು. ಪುಸ್ತಕಗಳನ್ನು ಓದುವುದರಿಂದ ನಮ್ಮ ಬೌದ್ಧಿಕ ಕೌಶಲ್ಯಗಳು ಹೆಚ್ಚಾಗಿ, ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗಿವೆ ಎಂದು ಹೇಳಿದರು.
ಶಿಕ್ಷಕ ಎಸ್ ಆರ್ ಚಾಳೇಕರ ಮಾತನಾಡಿ, ಪುಸ್ತಕಗಳು ಮನುಷ್ಯನಿಗೆ ಗುರುವಾಗಿ, ಸಂಗಾತಿಯಾಗಿ, ಮಾರ್ಗದರ್ಶಿಯಾಗಿ ಸನ್ಮಾರ್ಗವನ್ನು ತೋರಿಸುತ್ತವೆ. ನೈತಿಕತೆಯ ಮಟ್ಟ ಕಡಿಮೆಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ನೀತಿಪಾಠ ತಿಳಿಸಿ ಕೊಡುವ ಪುಸ್ತಕಗಳ ಓದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಅನಿಲ ಪತಂಗಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಶಿಕ್ಷಕರಾದ ವ್ಹಿ ವೈ ಪತ್ತಾರ, ಎಸ್ ಎಸ್ ಅರಬ ಹಾಗೂ ಶಿಕ್ಷಕರಾದ ಎನ್ ಬಿ ಚೌಧರಿ, ಜೆ ಸಿ ಗುಣಕಿ, ಎಸ್ ಎನ್ ಡಂಗಿ, ಜೆ ಎಂ ಪತಂಗಿ, ಎಫ್ ಎ ಹೊರ್ತಿ, ಎಸ್ ವ್ಹಿ ಬೇನೂರ, ಶಾಂತೇಶ ಹಳಗುಣಕಿ, ಶೃದ್ಧಾ ಬಂಕಲಗಾ, ಸುರೇಶ ದೊಡ್ಯಾಳಕರ, ಎಸ್ ಡಿ ಬಿರಾದಾರ,ಸಾವಿತ್ರಿ ಸಂಗಮದ ಮತ್ತು ಅತಿಥಿ ಶಿಕ್ಷಕರಾದ ಯಲ್ಲಮ್ಮ ಸಾಲೋಟಗಿ, ಪ್ರಜ್ವಲ ಕುಲಕರ್ಣಿ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.