ಮಹಿಳೆಯರನ್ನು ಜಾಗ್ರತಗೊಳಿಸುವ ಪ್ರಯತ್ನವೇ ಸಪ್ತ ಶಕ್ತಿಸಂಗಮ ಕಾರ್ಯಕ್ರಮದ ಉದ್ದೇಶವಾಗಿದೆ.
ಮುದ್ದೇಬಿಹಾಳ: ಮಹಿಳೆಯರನ್ನು ಜಾಗ್ರತಗೊಳಿಸುವ ಪ್ರಯತ್ನವೇ ಸಪ್ತ ಶಕ್ತಿಸಂಗಮ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ನಿವೃತ್ತ ಶಿಕ್ಷಕಿ ಮಹಾದೇವಿ ಕಂಠಿ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಮಾತೃ ಭಾರತಿ ಮಹಿಳಾ ಘಟಕದಲ್ಲಿ ವಿದ್ಯಾ ಭಾರತಿ ಸೂಚಿಸಿದ ಪ್ರಕಾರ ಆಯೋಜಿಸಿರುವ ಸಪ್ತ ಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯಅತಿಥಿ ಸ್ಥಾನವಹಿಸಿ ಮಾತನಾಡಿದರು. ಭಗವದ್ಗೀತೆಯ 10ನೇ ಅಧ್ಯಾಯದ 34ನೇ ಶ್ಲೋಕದಲ್ಲಿ ಹೇಳಿರುವಂತೆ ಒಬ್ಬ ಮಹಿಳೆಯಲ್ಲಿ ಕೀರ್ತಿ, ಐಶ್ವರ್ಯ, ವಾಕ್ ಶಕ್ತಿ, ಸ್ಮರಣ ಶಕ್ತಿ, ಬುದ್ಧಿಶಕ್ತಿ, ದೃಢತೆ ಮತ್ತು ತಾಳ್ಮೆ ಎಂಬ ಏಳು ಸದ್ಗುಣಗಳು ಅಡಗಿದ್ದು ಅದನ್ನು ಜಾಗ್ರತಗೊಳಿಸುವ ಕೆಲಸವಾಗ ಬೇಕಾಗಿದೆ. ನೂಲಿನಂತೆ ಸೀರೆ, ತಾಯಿಯಂತೆ ಮಗಳು ಎನ್ನುವ ಗಾಧೆಮಾತನ್ನು ನೋಡಿದಾಗ ಸಂಸ್ಕಾರ ಪ್ರವಹಿಸುವಲ್ಲಿ ಮಾತೆಯ ಪಾತ್ರವೆ ಮುಖ್ಯವಾಗಿದೆ. ಸಮಾಜ ವ್ಯವಸ್ಥೆಯಲ್ಲಿ ಸ್ತ್ರೀಯು ಪ್ರಧಾನವಾಗಿರುವುದನ್ನು ಪುರಾಣದಿಂದ ಹಿಡಿದು ಇತಿಹಾಸದ ಪುಟಪುಟಗಳನ್ನ ತೆಗೆದುನೋಡುತ್ತಾ ಬಂದರೆ ಸಾಕಷ್ಟು ನಿದರ್ಶನಗಳು ದೊರೆಯುತ್ತದೆ. ಅದನ್ನು ನಾವು ತಿಳಿದುಕೊಂಡು ನಮ್ಮ ಮನೆಯ ಮಕ್ಕಳಿಂದ ಹಿಡಿದು ಸಮಾಜ ತಿದ್ದುವ ಕಾರ್ಯವಾಗ ಬೇಕಾಗಿದೆ ಎಂದು ಹೇಳಿದರು.
ಆಂಗ್ಲ ಮಾಧ್ಯಮ ಮುಖ್ಯಗುರು ಮಾತೆ ರಂಜಿತಾ ಭಟ್ಟ ಸಂಸ್ಕಾರ, ಸನ್ನಡತೆ ಮತ್ತು ವಿವೇಕ ಪ್ರಜ್ಞೆಗಳ ಮೂಲಕ ನಮ್ಮಲ್ಲಿರುವ ಅಧಮ್ಯ ಚೈತನ್ಯವನ್ನು ನಾವೆ ಜಾಗ್ರತಗೊಳಿಸಿಕೊಳ್ಳುತ್ತಾ ಸತ್ಕಾರ್ಯಗಳಿಗೆ ಸದಾ ಬಳಸಿಕೊಳ್ಳಲು ಪ್ರಯತ್ನಿಸುತ್ತೇನೆ. ತನ್ಮೂಲಕ ರಾಷ್ಟ್ರದ ಏಕತೆಯನ್ನು ಕಾಪಾಡಿಕೊಳ್ಳುತ್ತೇವೆ ಎಂದು ಪ್ರತಿಜ್ಞಾ ವಿಧಿ ಬೋಧಿಸಿ ಸ್ವೀಕರಿಸಿದರು.
ಮಾತೃ ಭಾರತಿ ಘಕಟ ಸಂಯೋಜಕರಾದ ಅನ್ನಪೂರ್ಣ ನಾಗರಾಳ ಅಧ್ಯಕ್ಷತೆಯನ್ನು ವಹಿಸಿ ಪಂಚಪರಿವರ್ತನೆಯ ಮೇಲೆ ಮಾತನಾಡಿದರು.
ಪ್ರಾಥಮಿಕ ವಿಭಾಗದ ಮುಖ್ಯ ಗುರುಮಾತೆ ಸರಸ್ವತಿ ಮಡಿವಾಳರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ಇಂದು ನಾಯಕ ಸ್ವಾಗತಿಸಿದರು. ಶಿಕ್ಷಕಿ ಮೀನಾಕ್ಷಿ ಗಣಾಚಾರಿ ವಂದಿಸಿದರು. ಮಕ್ಕಳು ವೀರ ವನಿತೆಯರ ಛದ್ಮ ವೇಷ ಧರಿಸುವುದರೊಂದಿಗೆ ಅವರ ಪಾತ್ರವನ್ನು ಸಭೀಕರಿಗೆ ಮತ್ತೊಮ್ಮೆ ಪರಿಚಯಿಸುವ ಕೆಲಸ ಮಾಡಿದರು.