ಹಿಂದು ಸಮ್ಮೇಳನ ಬೃಹತ್ ಶೋಭಾಯಾತ್ರೆ ಅದ್ದೂರಿದಿಂದ ಕೂಡಿದ್ದು ಸಹಸ್ರಾರು ಜನರು ಪಾಲ್ಗೊಂಡು ಹಿಂದುತ್ವದ ಶಕ್ತಿ ಪ್ರದರ್ಶನ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಬೃಹತ್ ಹಿಂದು ಸಮ್ಮೇಳನ ಅಂಗವಾಗಿ ರವಿವಾರ ಆಯೋಜಿಸಿದ್ದ ಬೃಹತ್ ಶೋಭಾಯಾತ್ರೆ ಅದ್ದೂರಿತನದಿಂದ ಕೂಡಿದ್ದು ಸಹಸ್ರಾರು ಜನರು ಪಾಲ್ಗೊಂಡು ಹಿಂದುತ್ವದ ಶಕ್ತಿ ಪ್ರದರ್ಶಿಸಿದರು. ಶ್ರೀ ಬನಶಂಕರಿ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವ, ಭಾರತಾಂಬೆ ಹಾಗೂ ಶ್ರೀರಾಮನ ಆಕರ್ಷಕ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಹಿಂದು ಸಮ್ಮೇಳನ ಸಂಚಾಲನಾ ಸಮಿತಿ ಮುಖಂಡರು, ಸ್ವಾಮೀಜಿಗಳು ಸಾಮೂಹಿಕವಾಗಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ಎಲ್ಲರೂ ಕೇಸರಿ ಶಾಲು ಧರಿಸಿ, ಬಹಳಷ್ಟು ಜನರು ಕೈಯಲ್ಲಿ ಕೇಸರಿ ಧ್ವಜ ಹಿಡಿದು ಮೆರವಣಿಗೆಯುದ್ದಕ್ಕೂ ಸಾಗಿ ಬಂದದ್ದು ಕೇಸರಿ ಮಹಾಪೂರ ಹರಿಯುವಂತೆ ಭಾಸವಾಯಿತು.
ಛತ್ರಪತಿ ಶಿವಾಜಿ ಮಹಾರಾಜ, ಬಸವಣ್ಣ, ರಾಣಿ ಚನ್ನಮ್ಮ ಸೇರಿ ಹಲವು ಹಿಂದು ರಾಜರು, ದಾರ್ಶನಿಕರು, ಶರಣರು ಇದ್ದ ಟ್ಯಾಬ್ಲೋಗಳು ಸಾಕಷ್ಟು ಗಮನ ಸೆಳೆದವು. ವಿವಿಧ ಸಮಾಜದವರು ತಮ್ಮ ಸಮಾಜ ಪ್ರತಿನಿಧಿಸುವ ಮಹಾನ್ ವ್ಯಕ್ತಿಗಳ ಟ್ಯಾಬ್ಲೋ ಸಮೇತ ಪಾಲ್ಗೊಂಡಿದ್ದರು. ಅಕ್ಕಸಾಲಿಗರು ಟ್ರ್ಯಾಕ್ಟರನಲ್ಲಿ ತಮ್ಮ ಅಕ್ಕಸಾಲಿಗ ವೃತ್ತಿ ತೋರಿಸುವ ಪ್ರಾಯೋಗಿಕ ಚಿತ್ರಣದ ಟ್ಯಾಬ್ಲೋ ರಚಿಸಿ ಪಾಲ್ಗೊಂಡಿದ್ದು ಕರಕುಶಲ ಕಲೆಗೆ ಕನ್ನಡಿ ಹಿಡಿದಂತಾಗಿತ್ತು.
ಕೊಂಬು, ಕಹಳೆ, ಡೊಳ್ಳು, ಹಲಗೆ, ಕರಡಿಮಜಲು, ಗಾರುಡಿ ಗೊಂಬೆ, ಶ್ರೀರಾಮಾಯಣ ಪರಿಕಲ್ಪನೆಯ ವೇಷಧರಿಸಿದ್ದ ವೇಷ್ಯಾಗಾರರು, ಹೆಜ್ಜೆ ಕುಣಿತ, ಜೋಗತಿ ನೃತ್ಯ ಸೇರಿ ಹಲವು ಜಾನಪದ ಪ್ರಾಕಾರಗಳು ಮೆರವಣಿಗೆಯ ಶೋಭೆ ಹೆಚ್ಚಿಸಿದ್ದವು. ಲೋಹಾರ (ಕಂಬಾರ) ಸಮಾಜದವರು ತಯಾರಿಸಿದ್ದ ಶ್ರೀರಾಮನ ಭವ್ಯ ಪ್ರತಿಮೆ ಮೆರವಣಿಗೆಯ ಮುಂಚೂಣಿಯಲ್ಲಿದ್ದು ಪ್ರಮುಖ ಆಕರ್ಷಕಣೆಯಾಗಿತ್ತು.
ಕೇಸರಿ ಶಾಲು, ಪೇಟಾ ಧರಿಸಿದ್ದ ಮಹಿಳೆಯರು, ಯುವಕರು, ಅಭಿಮಾನಿಗಳು ಹಿಂದುತ್ವಕ್ಕೆ ಜಯವಾಗಲಿ ಎಂದು ಘೋಷಣೆ ಕೂಗುತ್ತ ಹಿಂದುತ್ವದ ಮಹತ್ವ ಸಾರಿ ಹೇಳಿದರು. ಒಂದು ಕಿಮಿಗೂ ಹೆಚ್ಚು ಉದ್ದ ಇದ್ದ ಶೋಭಾಯಾತ್ರೆಯು ಬನಶಂಕರಿ ದೇವಸ್ಥಾನ, ಇಂದಿರಾಗಾಂಧಿ, ಮಹಾತ್ಮಾಗಾಂಧಿ ವೃತ್ತ, ದ್ಯಾಮವ್ವನ ಕಟ್ಟೆ, ಮುಖ್ಯ ಬಜಾರ್, ಬಸವೇಶ್ವರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಡಾ|ಬಿ.ಆರ್.ಅಂಬೇಡ್ಕರ್ ವೃತ್ತ ಮಾರ್ಗವಾಗಿ ಸಂಚರಿಸಿ ವಿಬಿಸಿ ಪ್ರೌಢಶಾಲೆಯ ಮೈದಾನದ ವೇದಿಕೆಗೆ ಬರಲು ಅಂದಾಜು 3 ಘಂಟೆ ಕಾಲಾವಧಿ ತೆಗೆದುಕೊಂಡದ್ದು ಶೋಭಾಯಾತ್ರೆಯ ಮಹತ್ವ ಸಾರಿ ಹೇಳಿದಂತಿತ್ತು.
ಅಲ್ಲಲ್ಲಿ ರಸ್ತೆ ಮೇಲೆ ರಂಗೋಲಿ ಬಿಡಿಸಲಾಗಿತ್ತು. ತಳಿರು ತೋರಣ ಕಟ್ಟಲಾಗಿತ್ತು. ಪಾಲಕರು ತಮ್ಮ ಮಕ್ಕಳಿಗೆ ಸ್ವಾಮಿ ವಿವೇಕಾನಂದ, ಶ್ರೀರಾಮ, ಹನುಮಮಂತ, ಶಿವಾಜಿ ಮಹಾರಾಜ , ರಾಣಿ ಚನ್ನಮ್ಮ ಸೇರಿ ಹಲವು ಮಹಾನ್ ವ್ಯಕ್ತಿಗಳ ವೇಷಭೂಷಣ ತೊಡಿಸಿ ಅಲ್ಲಲ್ಲಿ ನಿಲ್ಲಿಸಿ ಶೋಭಾಯಾತ್ರೆಯನ್ನು ಸ್ವಾಗತಿಸಿ ಸಂಭ್ರಮಿಸಿದರು.


















