ಲಿಂಗಸೂಗೂರು: ಅಕ್ರಮವಾಗಿ ಪಡಿತರ ಅಕ್ಕಿಯನ್ನು ಗೋಡೌನ್ ನಲ್ಲಿ ಸಂಗ್ರಹಿಸಲಾಗಿದೆ ಎಂದು ಗೋಡೌನ್ ಮಾಲೀಕರಿಗೆ ಬೆದರಿಕೆ ಹಾಕಿ 5ಲಕ್ಷ ಬೇಡಿಕೆ ಇಟ್ಟಿದ್ದ ಬೆಂಗಳೂರು ಮೂಲದ ನಕಲಿ ಪತ್ರಕರ್ತರ ತಂಡವೊಂದು ಪೊಲೀಸರ ಅತಿಥಿಯಾದ ಘಟನೆ ನಡೆದಿದೆ.
ರಾಯಚೂರ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ಚಾವಡಿ ಕಟ್ಟೆಯ ಬಳಿ ಇರುವ, ವಿರೇಶ್ ಗೌಡ ಎಂಬುವವರ ಅಕ್ಕಿ ಗೋಡೌನ್ ನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿಡಲಾಗಿದೆ ಎಂದು ಬೆಂಗಳೂರು ಮೂಲದ 6 ಜನರ ಖಾಸಗಿ ಸುದ್ದಿ ವಾಹಿನಿ ನಕಲಿ ಪತ್ರಕರ್ತರ ತಂಡವೊಂದು ಫಿಲ್ಡಿಗಿಳಿದಿತ್ತು. ವಿಡಿಯೋ ಚಿತ್ರೀಕರಣಕ್ಕೆ ಮುಂದಾಗಿದ್ದ ಪತ್ರಕರ್ತರನ್ನು ವಿರೇಶ್ ಗೌಡನ ಗೆಳೆಯ ಸಲೀಂ ಎನ್ನುವವರು ನೀವು ಯಾರು? ಯಾವ ಸುದ್ದಿವಾಹಿನಿಯರು ಎಂದು ಪ್ರಶ್ನೆ ಮಾಡಿದ್ದಾರೆ. ಆಗ ನಕಲಿ ಪತ್ರಕರ್ತರ ಗುಂಪಿನ ಸದಸ್ಯರಿಬ್ಬರು ನಾವು ಮೀಡಿಯಾದವರು ಈ ಗೋಡೌನ್ ನಲ್ಲಿ ಅಕ್ರಮವಾಗಿ ಪಡಿತರವನ್ನು ಸಂಗ್ರಹಿಸಿಡಲಾಗಿದೆ. ವಿರೇಶ್ ಗೌಡಗೆ ಕರೆ ಮಾಡಿ ಬರಲು ತಿಳಿಸಿ ಎಂದು ಹೇಳಿದ್ದಾರೆ.
ಈ ಹಿನ್ನಲೆಯಲ್ಲಿ ನಕಲಿ ಪತ್ರಕರ್ತರ ತಂಡ ವಿರೇಶ್ ಗೌಡನಿಗೆ ನಿಮ್ಮ ಗೋಡೌನ್ ನಲ್ಲಿ ಅಕ್ರಮವಾಗಿ ಪಡಿತರ ಸಂಗ್ರಹಿಸಲಾಗಿದೆ. 5 ಲಕ್ಷ ರೂ. ಹಣ ನೀಡಿದರೆ ನಿಮ್ಮ ವಿರುದ್ಧ ಯಾವುದೇ ವರದಿಗಳನ್ನು ಬಿತ್ತರಿಸಲಾಗುವುದಿಲ್ಲಾ ಎಂದು ಹೇಳುತ್ತಾರೆ. ಈ ವೇಳೆ ವಿರೇಶ್ ಗೌಡ ಅವರು ನಮ್ಮ ಗೋಡೌನ್ ನಲ್ಲಿ ಯಾವುದೇ ರೀತಿಯ ಅಕ್ರಮ ಪಡಿತರವನ್ನು ಸಂಗ್ರಹಿಸಿಲ್ಲ. ನಮ್ಮ ಗೋಡೌನ್ ನಲ್ಲಿ ಸೋನಾ ಮಸೂರಿ ಅಕ್ಕಿಯ ಪಾಕೇಟ್ಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ ಎಂದು ಹೇಳುತ್ತಾರೆ. ಆದರೂ ಇದನ್ನ ಒಪ್ಪದ ನಕಲಿ ಪತ್ರಕರ್ತರು ಹಣ ನೀಡಲು ಒತ್ತಡ ಹೇರುತ್ತಾರೆ. ಇಬ್ಬರ ನಡುವೆ ವಾದ ವಿವಾದಗಳೂ ಜರುಗುತ್ತವೆ.
ಇಷ್ಟರಲ್ಲಾಗಲೇ ಈ ವಿಷಯ ತಿಳಿದ ಆಹಾರ ಇಲಾಖೆಯ ನಿರೀಕ್ಷಕ ರಾಮಕೃಷ್ಣ ಅವರು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿ ಅನುಮಾನಗೊಂಡು ನಕಲಿ ಪತ್ರಕರ್ತರ ವಿರುದ್ಧ ಮುದುಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ದೂರಿನನ್ವಯ ಆರೋಪಿಗಳಾದ ರಾಜು ಮಡಿವಾಳ, ಅರ್ಪಿತಾ ಶಂಕರ ಮೂರ್ತಿ, ಪ್ರದೀಪ್ ಕುಮಾರ್, ನಾಗರಾಜ, ಮಹಾದೇವಿ ತಿಂಥಣಿ, ಮೇಘನಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇನ್ನೂ ಈ ಒಂದು ನಕಲಿ ಪತ್ರಕರ್ತರ ತಂಡದ ವಿರುದ್ಧ ಈಗಾಗಲೆ ವಿವಿಧ ಜಿಲ್ಲೆಗಳಲ್ಲಿ ದೂರುಗಳಿದ್ದು, ಹನಿಟ್ರ್ಯಾಪ್ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ದೂರುಗಳಿರುವುದು ಬೆಳಕಿಗೆ ಬಂದಿದೆ. ಪೊಲೀಸರ ಅಥಿತಿಯಾಗಿರುವ ನಕಲಿ ಪತ್ರಕರ್ತರ ವಿರುದ್ಧ ಕಠಿಣ ಕ್ರಮವಾಗಬೇಕು ಮತ್ತು ನಕಲಿ ಪತ್ರಕರ್ತರ ಹಾವಳಿ ತಡೆಗಟ್ಟಬೇಕು ಎನ್ನುವುದು ರಾಯಚೂರು ಜಿಲ್ಲಾ ಪತ್ರಕರ್ತರ ಬೆಡಿಕೆಯಾಗಿದೆ.