ಅಜ್ಜಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ..
ಹನೂರು: ನಮ್ಮ ಶಾಲಾವರಣದಲ್ಲಿ ಶಿಕ್ಷಕರನ್ನು ಗೌರವಿಸುವ ಸಲುವಾಗಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಮೇರಿ ತಿಳಿಸಿದರು. ನಂತರ ಮಾತನಾಡಿದ ಅವರು ಭಾರತ ರತ್ನ ಪುರಸ್ಕೃತ, ಮೊದಲ ಉಪರಾಷ್ಟ್ರಪತಿ ಮತ್ತು ಸ್ವತಂತ್ರ ಭಾರತದ ಎರಡನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಆಚರಿಸಲಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಎಂದರೆ ಅವನ ಹಿಂದೆ ಪ್ರಮುಖ ಪಾತ್ರ ವಹಿಸುವುದು ಒಬ್ಬ ಗುರು. ಪ್ರತಿಯೊಬ್ಬರಿಗೂ ಶಿಕ್ಷಣ ಹೇಗೆ ಮುಖ್ಯವೋ, ಹಾಗೇಯೆ ಆ ಶಿಕ್ಷಣ ನೀಡುವ ಗುರುವು ಅಷ್ಟೇ ಮುಖ್ಯ. ಗುರುವಿಲ್ಲದೆ ಗುರಿಯನ್ನು ತಲುಪುವುದು ಬಹಳ ಕಷ್ಟ. ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿಯನ್ನು ಹುಟ್ಟು ಹಾಕುವ ಸೂತ್ರಧಾರನೇ ಶಿಕ್ಷಕ ಎಂದರೆ ತಪ್ಪಾಗಲಾರದು. ಮಕ್ಕಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ಸಹಶಿಕ್ಷಕರಾದ ವೆಂಕಟರಾಜುರವರು ಮಾತನಾಡಿ ಶಿಕ್ಷಕರ ದಿನಾಚರಣೆಯಲ್ಲಿ ಈ ಶಾಲೆಗೆ ವರ್ಗಾವಣೆಯಾಗಿ ಬಂದಿರುವ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಕುಳಂದೈರಾಜ್ ರವರು 35000/- ರೂ ಬೆಲೆಬಾಳುವ ಸೌಂಡ್ ಸಿಸ್ಟಮ್, ಮೈಕ್ ಸೆಟ್ ಹಾಗೂ ಅಹುಜಾ ಅಂಪ್ಲಿಪೈರ್ ನ್ನು ಶಾಲೆಗೆ ಕೊಡುಗೆಯಾಗಿ ನೀಡಿರುತ್ತಾರೆ. ಸೇವಾ ಮನೋಭಾವವುಳ್ಳ ಇಂತಹ ಶಿಕ್ಷಕರ ಸೇವೆ ಶ್ಲಾಘನೀಯ ಎಂದು ತಿಳಿಸಿದರು. ವಿದ್ಯಾರ್ಥಿಗಳು ಶಿಕ್ಷಕರಿಗೆ ವಿವಿಧ ಮನರಂಜನೆ ಆಟಗಳನ್ನು ಆಡಿಸಿ ಬಹುಮಾನ ವಿತರಿಸಿ ಸಂತಸಪಟ್ಟರು.
ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಶ್ರೀ ದೊರೆಸ್ವಾಮಿ, ಶ್ರೀಮತಿ ಕಲ್ಪನ, ಶ್ರೀ ಕುಳಂದೈ ರಾಜ್, ಶ್ರೀಮತಿ ಮಲೆಮಹಾದೇವಮ್ಮ, ಅತಿಥಿ ಶಿಕ್ಷಕರಾದ ಮೀನಾಕ್ಷಿಯವರು ಹಾಜರಿದ್ದರು.
ವರದಿ: ಚೇತನ್ ಕುಮಾರ್ ಎಲ್, ಹನೂರು ತಾಲೂಕು, ಚಾಮರಾಜನಗರ ಜಿಲ್ಲೆ..