ಎರಡು ದಿನಗಳ ಬಳಿಕ ಘಟನೆ ಬೆಳಕಿಗೆ:
ಲಿಂಗಸೂಗೂರು: ತಾಲೂಕಿನ ಮುದಗಲ್ ಹೋಬಳಿಯ ಕನ್ನಾಪೂರ ಹಟ್ಟಿ ಹೊರವಲಯದ ಜವಾಹರ ನವೋದಯ ವಿದ್ಯಾಲಯದಲ್ಲಿ 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರ ಎದುರೇ ಹೊಡೆದಾಡಿಕೊಂಡು ಸುಮಾರು 20 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.
1994 ರಲ್ಲಿ ಆರಂಭವಾದ ಕೇಂದ್ರ ಸರಕಾರದ ಈ ವಿದ್ಯಾಲಯದಲ್ಲಿ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು 6 ರಿಂದ 12 ನೇ ತರಗತಿಯ ವರೆಗೆ ಆಂಗ್ಲ ಮಾದ್ಯಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 50 ಕ್ಕೂ ಹೆಚ್ಚು ಶಿಕ್ಷಕರು ಪಾಠ ಭೋದನೆ ಮಾಡುತ್ತಿದ್ದಾರೆ. ಗುರುವಾರ ರಾತ್ರಿ 10 ಗಂಟೆಗೆ ಎಂಟು ಮತ್ತು ಒಂಬತ್ತನೇ ತರಗತಿಯ ಮಕ್ಕಳು ಕ್ಷುಲ್ಲಕ ಕಾರಣಕ್ಕೆ ಶಿಕ್ಷಕರ ಎದುರೇ ದೊಣ್ಣೆಗಳನ್ನು ಹಿಡಿದು ಬಡಿದಾಡಿಕೊಂಡು ಗಂಭೀರ ಗಾಯಗಳನ್ನು ಮಾಡಿಕೊಂಡಿದ್ದಾರೆ.
ಅಲ್ಲದೆ ಶಾಲೆಯ ಕಟ್ಟಡದ ಕಿಟಕಿಯ ಗಾಜು, ವಿದ್ಯುತ್ ಸಾಮಾಗ್ರಿಗಳನ್ನು ಬಡಿಗೆಯಿಂದ ಹೊಡೆದು ಜಖಂಗೊಳಿಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಪ್ರಾಚಾರ್ಯರು ಮರುದಿನ ಅವರ ಪಾಲಕರನ್ನು ಕರೆಯಿಸಿ ತಮ್ಮ ಗ್ರಾಮಗಳಿಗೆ ಕಳಿಸಿದ್ದಾರೆಂಬುದು ತಿಳಿದುಬಂದಿದೆ. ಈ ಘಟನೆ ನಡೆದು ಎರಡು ದಿನಗಳು ಕಳೆದರೂ ಪ್ರಾಚಾರ್ಯರಾಗಲಿ ಶಿಕ್ಷಕರಾಗಲಿ ಠಾಣೆಗೆ ಯಾವುದೇ ದೂರನ್ನೂ ನೀಡದೇ ಇರುವುದು ನಾನಾ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ವಿದ್ಯಾಲಯದ ಪ್ರಾಚಾರ್ಯ ಹಾಗೂ ಕೆಲ ಶಿಕ್ಷಕರ ಮದ್ಯ ಹೊಂದಾಣಿಕೆ ಇರದೇ ಇದ್ದರಿಂದ ಕೆಲ ಮಕ್ಕಳನ್ನು ಪ್ರಾಚಾರ್ಯರು ಎತ್ತಿಕಟ್ಟದರೆ, ಇನ್ನೂ ಕೆಲವರನ್ನು ಶಿಕ್ಷಕರು ಎತ್ತಿಕಟ್ಟಿ ಜಗಳವಾಡಿಸಲು ಮುಂದಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ದಿನನಿತ್ಯ ಒಂದಿಲ್ಲೊಂದು ಗಲಾಟೆ ನಡೆದರೂ ಯಾರೂ ಕೂಡಾ ತಲೆಕೆಡಿಸಿಕೊಳ್ಳುತ್ತಿಲ್ಲ.
ಕೂಡಲೇ ಜಿಲ್ಲಾಧಿಕಾರಿಗಳು ಎಚ್ಚೆತ್ತು ಪಾಚಾರ್ಯ ಕೆಲ ಶಿಕ್ಷಕರನ್ನು ಬೇರೆಡೆಗೆ ವರ್ಗಾವಣೆ ಮಾಡಿದರೆ ಮಾತ್ರ ಶಾಲೆ ಸುಗಮವಾಗಿ ನಡೆಯುತ್ತದೆ ಎಂದು ವಿದ್ಯಾರ್ಥಿಗಳ ಪಾಲಕರು ನೋವನ್ನು ತೋಡಿಕೊಂಡಿದ್ದಾರೆ.