ಕರ ವಸೂಲಾತಿ: ಪ್ರಗತಿ ಸಾಧಿಸಿ: ಜಿ.ಪಂ ಉಪ ಕಾರ್ಯದರ್ಶಿಗಳ ಸೂಚನೆ
ವಿಜಯಪುರ : ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿಗಳಾದ.ಪ್ರಕಾಶ ವಡ್ಡರ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್-2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರೊಂದಿಗೆ ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ ವಸೂಲಾತಿ ಕುರಿತು ಪ್ರಗತಿ ಪರಿಶೀಲನಾ ಸಭೆ ಜರುಗಿತು.ಮಾತನಾಡಿದ ಉಪ ಕಾರ್ಯದರ್ಶಿ ಅವರು, ಗ್ರಾಮ ಪಂಚಾಯತಿಗಳು ಸರ್ಕಾರದ ಅನುದಾನಕ್ಕಿಂತ ಸ್ಥಳೀಯವಾಗಿ ಸಂಗ್ರಹವಾಗುವ ಸಂಪನ್ಮೂಲಗಳ ಮೇಲೆ ನೌಕರರ ವೇತನ, ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ, ಸ್ವಚ್ಛತೆ ಮತ್ತಿತರ ಕಾರ್ಯಗಳಿಗೆ ಅನುದಾನ ಬಳಸಬೇಕಾಗುತ್ತದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಹಲವಾರು ಯೋಜನೆಗಳು ಜಾರಿಗೆಯಲ್ಲಿವೆ. ಈ ಎಲ್ಲ ಯೋಜನೆಗಳ ಸೌಲಭ್ಯಗಳನ್ನು ಸಕಾಲದಲ್ಲಿ ಗ್ರಾಮೀಣ ಜನರಿಗೆ ತಲುಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಮತ್ತು ಗ್ರಾಮ ಪಂಚಾಯತಿಗಳನ್ನು ಸಬಲೀಕರಣಗೊಳಿಸುವುದೂ ಸಹ ನಮ್ಮ ಜವಾಬ್ದಾರಿಯಾಗಿದೆ. ನಮ್ಮ ಜವಾಬ್ದಾರಿಯನ್ನು ಅವಕಾಶ ಎಂದು ತಿಳಿದು ಈ ಅವಕಾಶವನ್ನು ಉಪಯೋಗಿಸಿಕೊಂಡು ನಾವು ಗ್ರಾಮೀಣ ಮಟ್ಟದ ಜನರಿಗೆ ಮೀಸಲಿರುವ ಸೇವೆಗಳನ್ನು ಅವರಿಗೆ ತಲುಪಿಸಿದರೆ ಮಾತ್ರ ನಾವು ಯಶಸ್ವಿ ಕಾಣುತ್ತೇವೆ.
ಈ ನಿಟ್ಟಿನಲ್ಲಿ ಗ್ರಾ.ಪಂ ಮಟ್ಟದಲ್ಲಿ ತೆರಿಗೆ ವಸೂಲಾತಿ ವಿಷಯದಲ್ಲಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್-2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ತಮ್ಮ ತಮ್ಮ ಗ್ರಾಮ ಪಂಚಾಯತಿಗಳ ಕರ ವಸೂಲಾತಿ ಸಿಬ್ಬಂದಿಯೊಂದಿಗೆ ಮುತುವರ್ಜಿ ವಹಿಸಿ ಅಭಿಯಾನದ ರೂಪದಲ್ಲಿ ಆದ್ಯತೆಯ ಮೇರೆಗೆ ಪ್ರಗತಿ ಸಾಧಿಸಬೇಕು. ಒಂದು ವೇಳೆ ನಿಗದಿಪಡಿಸಿದ ಗುರಿ ಸಾಧಿಸದಿದ್ದಲ್ಲಿ ಕಟ್ಟುನಿಟ್ಟಿನ ಕ್ರಮವಹಿಸಲಾವುವುದು.ಗ್ರಾಮ ಪಂಚಾಯತಿಯ ಎಲ್ಲಾ ಸಿಬ್ಬಂದಿ ನಿಗದಿತ ಸಮಯಾನಿಸಾರ ಕಚೇರಿಗೆ ಹಾಜರಾಗಿ ಇ-ಹಾಜರಾತಿ ಮೂಲಕ ಕಡ್ಡಾಯವಾಗಿ ತಮ್ಮ ಹಾಜರಾತಿಯನ್ನು ದಾಖಲಿಸಬೇಕು. ಪಂಚಾಯತಿಯ ಕಾರ್ಯದರ್ಶಿ ಗ್ರೇಡ್ -1 ಮತ್ತು ಗ್ರೇಡ್-2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ತಮಗೆ ವಹಿಸಿರುವ ಕರ್ತವ್ಯ ಜವಾಬ್ದಾರಿ ಅರಿತು ನಿರ್ವಹಿಸಬೇಕು ಎಂದು ಸೂಚಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಆಡಳಿತ ಶಾಖೆಯ ಅಧೀಕ್ಷಕರಾದ ತಹಸೀನ ಗುಣಕಿ, ಜಿಪಂನ ಸಿಬ್ಬ.ದಿ ಸಂತೋಷ ಪೂಜಾರಿ, ಶಿವರಾಜಕುಮಾರ ಹೊನವಾಡ, ಭೀಮಾಶಂಕರ ಬಿರಾದಾರ, ಜಿ.ಪಂನ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.


















