ಮುದ್ದೇಬಿಹಾಳ:ಕನ್ನಡ ಭಾಷೆ ಉಳಿಸಿ, ಬೆಳೆಸಲು ಸರ್ಕಾರವು ಎಲ್ಲ ಇಲಾಖೆಗಳಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸಿ ಆದೇಶಿಸಬೇಕು. ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯಗಳ ನ್ಯಾಯಾಧೀಶರು ಕನ್ನಡದಲ್ಲೇ ತೀರ್ಪುಗಳನ್ನು ಕೊಡುತ್ತಿರುವುದು ಕನ್ನಡಿಗರು ಹೆಮ್ಮೆ ಪಡುವಂಥ ಸಂಗತಿಯಾಗಿದೆ ಎಂದು ಮುದ್ದೇಬಿಹಾಳ ತಾಲೂಕು ೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಅಶೋಕ ಮಣಿ ಅವರು ಹೇಳಿದರು.
ಪಟ್ಟಣದ ಮಲಿಕಸಾಬ ನದಾಫ ಅಮರಗೋಳ ಮಂಟಪದ ಮಾತೋಶ್ರೀ ಗಂಗಮ್ಮ ವೀರಪ್ಪ ಚಿನಿವಾರ ಪ್ರಧಾನ ವೇದಿಕೆಯಲ್ಲಿ ಶನಿವಾರ ನಡೆದ ಮುದ್ದೇಬಿಹಾಳ ತಾಲೂಕು ೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.
ಗಡಿನಾಡ ಪ್ರದೇಶಗಳಲ್ಲಿರುವ ಕನ್ನಡ ಶಾಲೆಗಳನ್ನು ಹೆಚ್ಚು ಅಭಿವೃದ್ದಿಗೊಳಿಸಬೇಕು. ಗ್ರಾಮೀಣ ಪ್ರದೇಶದ ಕನ್ನಡ ಶಾಲೆಗಳನ್ನು ಸುಸಜ್ಜಿತಗೊಳಿಸಿ ಉತ್ತಮ ಶಿಕ್ಷಕರ ನೇಮಿಸಬೇಕು. ಪ್ರತಿಯೊಂದು ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ವಾಚನಾಲಯ ಸ್ಥಾಪಿಸಿ ಕನ್ನಡ ಸಾಹಿತಿಗಳ ಪುಸ್ತಕಗಳನ್ನು ಓದುವ, ಜ್ಞಾನ ಬೆಳೆಸಿಕೊಳ್ಳುವ ಅಭಿರುಚಿ ಮೂಡಿಸಲು ಕ್ರಮ ಕೈಕೊಳ್ಳಬೇಕು. ಸಾಹಿತಿಗಳು, ಲೇಖಕರು ಪ್ರಕಟಿಸಿದ ಪುಸ್ತಕಗಳನ್ನು ಶೇ.೫೦ರಷ್ಟು ಕೊಂಡುಕೊಳ್ಳುವಂತೆ ಪುಸ್ತಕ ಪ್ರಾಧಿಕಾರ, ಗ್ರಂಥಾಲಯ ಇಲಾಖೆ, ಶಾಲೆ, ಕಾಲೇಜುಗಳಿಗೆ ಸೂಚಿಸಬೇಕು. ಬರೆಯುವವನ ಕೈ ಬರಿಗೈ ಎಂಬಂತೆ ಬಡ ಬರಹಗಾರರಿಗೆ, ಸಾಹಿತಿಗಳಿಗೆ, ಸಾಹಿತ್ಯದ ಅಧ್ಯಯನಕ್ಕಾಗಿ ಪ್ರೇಕ್ಷಣಿಯ ಸ್ಥಳ ವೀಕ್ಷಿಸಲು ಉಚಿತ ಬಸ್ ಪಾಸ್ ನೀಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಕೆಎಸ್ ಡಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡರು, ಸಮ್ಮೇಳನ ಕನ್ನಡ ಚಿಂತನೆಯ, ಭಾಷೆ, ಸಂಸ್ಕೃತ ಶ್ರೀಮಂತಗೊಳಿಸುವ ವೇದಿಕೆಯಾಗಬೇಕು. ಮೂಲಭೂತ ವಿಚಾರಗಳನ್ನು ಮೆಲುಕು ಹಾಕುವಂತಿರಬೇಕು. ಆಧುನಿಕ ತಂತ್ರಜ್ಞಾನ ಬಳಕೆಯಾಗಬೇಕು. ಯುವಕರಿಗೆ ಸರಿಯಾದ ಮಾರ್ಗದರ್ಶನ ಸಿಗಬೇಕು. ಒಳ್ಳೇಯದನ್ನು ಪ್ರೋತ್ಸಾಹಿಸಬೇಕು. ಶರಣ ನಾಡಿನ ಬಳಗ ಅತ್ಯಂತ ಶ್ರೀಮಂತ ಬಳಗವಾಗಿದ್ದು ಇದನ್ನು ರಕ್ಷಿಸುವ ಕೆಲಸ ಆಗಬೇಕು. ಇತಿಹಾಸ ಮರೆಮಾಚಿದರೆ ಮುಂದಿನ ಪೀಳಿಗೆಗೆ ಸತ್ಯ ತಿಳಿಸಲಾಗೊಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು. ಕೃಷ್ಣಾ ನದಿ ತೀರದ ಐತಿಹಾಸಿಕ ಅಮರಗೋಳ ಗ್ರಾಮ ಶರಣರ ಸ್ಮಾರಕ ಆಗಬೇಕು ಎಂದರು.
ಈ ವೇಳೆ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಪ್ರೊ.ಬಿ.ಎಂ.ಹಿರೇಮಠ, ಬಿಇಓ ಬಿ.ಎಸ್.ಸಾವಳಗಿ,ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ,ಮಾಜಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ನಾಲತವಾಡ ಕಸಾಪ ವಲಯ ಘಟಕದ ಅಧ್ಯಕ್ಷ ಡಾ.ದತ್ತಾತ್ರೇಯ ಮಳಖೇಡ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಕಸಾಪ ತಾಲೂಕಾಧ್ಯಕ್ಷ ಕಾಮರಾಜ ಬಿರಾದಾರ ಕನ್ನಡ, ಸಾಹಿತ್ಯ, ಸಂಘಟನೆ ಕುರಿತು ಮಾತನಾಡಿದರು. ಸಾನಿಧ್ಯ ವಹಿಸಿದ್ದ ಡಾ.ಶ್ರೀಗುರು ಚನ್ನವೀರ ಶಿವಾಚಾರ್ಯರು ಆಶಿರ್ವಚನ ನೀಡಿದರು.
ಖಾರಿಇಸಾಕ್‌ಅಹ್ಮದ್ ಮಾಗಿ, ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರವಿಂದ ಹೂಗಾರ, ಕಸಾಪ ಗೌರವಾಧ್ಯಕ್ಷ ಎಂ.ಬಿ.ನಾವದಗಿ, ತಾಪಂ ಇಓ ಎನ್.ಎಸ್.ಮಸಳಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಮುದ್ನೂರ, ಗಣ್ಯರಾದ ಬಿ.ಸಿ.ಮೋಟಗಿ, ಜಯಶ್ರೀ ಹಿರೇಮಠ, ಮದನಪಟೇಲ ಸಾಲವಾಡಗಿ ಬಾಂಬೆ, ಗುತ್ತಿಗೆದಾರ, ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಇನ್ನಿತರು ವೇದಿಕೆಯಲಿದ್ದರು.
ಇದೇ ವೇಳೆ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ – ಗೊಳಿಸಲಾಯಿತು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಾ.ಎಂ.ಎಂ.ಬೆಳಗಲ್ಲ ಅವರು ಕವನಸಂಕಲನ ಜೀವನದಿ, ಡಾ.ಪ್ರಕಾಶ ನರಗುಂದ ಅವರ ಅಭಿನಂದನ ಗ್ರಂಥ ಸಾರ್ಥಕ ಬದುಕು, ಶಿಕ್ಷಕಿ ಸುಮಲತಾ ಗಡಿಯಪ್ಪನವರ್ ಅವರ ನಾನಾಗಲಾರೆ ಬುದ್ಧ ಕವನ ಸಂಕಲನ, ಹುಸೇನಸಾಬ ಬಳಬಟ್ಟಿ ಸಂಪಾದಿತ ಕಂಕಣಭಾಗ್ಯ, ಕೊನೆಯ ಉಸಿರು ಗ್ರಂಥ, ಶಿವಪುತ್ರ ಅಜಮನಿ ಅವರ ಮನೆಗೂ ಮೈಲಿಗೆ ಕೃತಿ, ವೆಂಕಟೇಶ ಮಾಚಕನೂರ ಅವರ ಶಿಕ್ಷಣದಲ್ಲಿ ಮೌಲ್ಯಗಳು, ಸಮ್ಮೇಳನಾಧ್ಯಕ್ಷ ಅಶೋಕ ಮಣಿ ಅವರ ಅಮೃತ ಬಿಂದು ಕವನ ಸಂಕಲನ ಲೋಕಾರ್ಪಣೆಗೊಳಿಸಲಾಯಿತು.
ಸಂಗಮೇಶ ಶಿವಣಗಿ ತಂಡದವರು ಪ್ರಾರ್ಥಿಸಿದರು. ವೈ.ಎಚ್.ವಿಜಯಕರ್ ಸ್ವಾಗತಿಸಿದರು. ಬಸವರಾಜ ಹಂಚಲಿ, ಹೇಮಾ ಬಿರಾದಾರ ನಿರೂಪಿಸಿದರು.