ಸಿಂಧನೂರು: 7. 5 ಮೀಸಲಾತಿಗಾಗಿ ಮೇ 20 ಕ್ಕೆ ನಡೆಯುವ ಹೋರಾಟಕ್ಕೆ ದಲಿತ ಹಿಂದುಳಿದ ಅಲ್ಪಸಂಖ್ಯಾತ ಪ್ರಗತಿಪರ ಒಕ್ಕೂಟದಿಂದ ಬೆಂಬಲಿಸಿ ಭಾಗವಹಿಸಲಾಗುತ್ತದೆ. ವಾಲ್ಮೀಕಿ ಸಮಾಜಕ್ಕೆ 7.5 ಮೀಸಲಾತಿ ಹೆಚ್ಚಳಕ್ಕಾಗಿ ಪರಮ ಪೂಜ್ಯ ಶ್ರೀ ಪ್ರಸನ್ನನಂದ ಮಹಾಸ್ವಾಮಿಗಳು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಕಳೆದ 98 ದಿನಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಕನಿಷ್ಠ ಸೌಜನ್ಯ ತೋರಿಸದೆ ಇರುವುದರಿಂದ ನಮ್ಮ ಒಕ್ಕೂಟವು ಬಲವಾಗಿ ಖಂಡಿಸುತ್ತದೆ. ಮೇ 20 ರಂದು ಮೀಸಲಾತಿಗಾಗಿ ಆಗ್ರಹಿಸಿ ಎಸ್.ಸಿ. ಎಸ್.ಟಿ , ಜನಾಂಗದಿಂದ ಬೃಹತ್ ಪ್ರಮಾಣದ ಹೋರಾಟ ಮಾಡಿ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಒತ್ತಾಯಿಸುವ ಹೋರಾಟದಲ್ಲಿ ದಲಿತ ಹಿಂದುಳಿದ ಅಲ್ಪಸಂಖ್ಯಾತ ಪ್ರಗತಿಪರ ಒಕ್ಕೂಟದ ಸಂಚಾಲಕರು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಾಗೂ ಜಾತ್ಯಾತೀತ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿ ಮಾಡಲಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ 7.5 ಮೀಸಲಾತಿ ಕೊಡುವುದಾಗಿ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಮಾತು ಕೊಟ್ಟ ಯಡಿಯೂರಪ್ಪ ಮತ್ತು ರಾಮುಲು ಈಗ ಮಾತು ಹಿಡೇರಿಸದೇ ವಚನ ಭ್ರಷ್ಟಾರಾಗಿದ್ದಾರೆ. ಮೀಸಲಾತಿಗಾಗಿ ಆಗ್ರಹಿಸಿ ಸಮಾಜದ ಸ್ವಾಮೀಜಿಗಳು ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ಮಾಡುತ್ತಿದ್ದು , ಮೇ 20 ಕ್ಕೆ 100 ದಿನಗಳಾಗಲಿದ್ದು , ಸರಕಾರದ ನಿರ್ಲಕ್ಷ್ಯದ ವಿರುದ್ಧ ಸ್ವಾಮಿಗಳ ಹೋರಾಟಕ್ಕೆ ಬೆಂಬಲಿಸಿ ಮೇ 20 ರಂದು ರಾಜ್ಯದಾದ್ಯಂತ ನಡೆಯುವ ಹೋರಾಟಕ್ಕೆ ನಮ್ಮ ಒಕ್ಕೂಟದ ಸಂಪೂರ್ಣ ಬೆಂಬಲವಿದೆ ಎಂದು ದಲಿತ ಹಿಂದುಳಿದ ಅಲ್ಪಸಂಖ್ಯಾತ ಪ್ರಗತಿಪರ ಒಕ್ಕೂಟದ ಪ್ರಧಾನ ಸಂಚಾಲಕ ಎಂ.ಗಂಗಾಧರ ಹೇಳಿದ್ದಾರೆ.