ಲೂಟಿ ನಿಲ್ಲಿಸಿ, ಬಡಜನರ ಮನೆಗೆ ವಿದ್ಯುತ್ ಸಂಪರ್ಕ ಕೊಡಿ: ಬಿಜೆಪಿ ಮುಖಂಡರ ವಾಗ್ದಾಳಿ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಪರ ನಿಂತ ಮುಖಂಡರು
ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆ
ಬೆಂಗಳೂರು ಮಾರ್ಚ್ 11: ನಿರ್ಮಾಣ ಹಂತದಲ್ಲಿರುವ ಅಥವಾ ಪೂರ್ಣಗೊಂಡಿರುವ ಕಟ್ಟಡಗಳಿಗೆ ವಾಸಯೋಗ್ಯ ಪ್ರಮಾಣ ಪತ್ರದ ಬಗ್ಗೆ ಸ್ಪಷ್ಟತೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘವು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿತು.
ಸಂಘದ ಪರವಾಗಿ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ. ಎನ್. ಅಶ್ವತ್ಥ ನಾರಾಯಣ, ವಿಧಾನ ಪರಿಷತ್‌ನ ವಿರೋಧ ಪಕ್ಷದ
ಮುಖ್ಯ ಸಚೇತಕರಾದ ಎನ್.ರವಿಕುಮಾರ್, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಶಾಸಕ ಸಿ.ಕೆ. ರಾಮಮೂರ್ತಿ, ಆಮ್ ಆದ್ಮಿ ಪಾರ್ಟಿ ಮುಖಂಡ ರವಿಕೃಷ್ಣಾ ರೆಡ್ಡಿ ಸೇರಿದಂತೆ ಇತರೆ ರಾಜಕೀಯ ಮುಖಂಡರು ಭಾಗಿಯಾಗಿ ಬೆಂಬಲ ಸೂಚಿಸಿದರು ಹಾಗೂ ಆಡಳಿತ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಪ್ರಮುಖ ವಿಚಾರವನ್ನು ವಿಧಾನ ಮಂಡಲ ಕಲಾಪದಲ್ಲಿ ಪ್ರಶ್ನಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, “ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಜನರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಪ್ರತಿಯೊಂದು ವಿಚಾರದಲ್ಲಿ ವಸೂಲಿಗೆ ನಿಂತಿದೆ. ಬಡವರು ಇಂದು ಜೀವನ ಮಾಡುವುದು ದುಸ್ಥರವಾಗಿದೆ. ಬಡವರ ಪರವಾಗಿ ಕೆಲಸ ಮಾಡಲು ಜನರು ಆಯ್ಕೆ ಮಾಡಿದ ಸರಕಾರ, ಜನರ ಮೇಲೆ ಸವಾರಿ ಮಾಡುತ್ತಿದೆ ಎಂದು ಆಕ್ರೋಶ” ವ್ಯಕ್ತಪಡಿಸಿದರು.
“ಕಷ್ಟಪಟ್ಟು ಮನೆಕಟ್ಟಿಕೊಳ್ಳುವುದಕ್ಕೆ ಮುಂದಾಗಿರುವ ಜನರಿಗೆ ಕರೆಂಟ್ ಸಂಪರ್ಕ ನೀಡಲು ಸರಕಾರ ಈ ರೀತಿಯ ಷರತ್ತು, ನಿಯಮಗಳನ್ನು ಹೇರಿಕೆ ಮಾಡುವ ಮೂಲಕ ಜನರ ಜೀವ ಹಿಂಡುವ ಕೆಲಸ ಮಾಡುತ್ತಿದೆ. ಸರಕಾರ ಸುಪ್ರೀಂ ಕೋರ್ಟ್ ನಿಯಮವನ್ನು ಪಾಲಿಸುವ ನೆಪದಲ್ಲಿ ಜನರ ಮೇಲೆ ದೌರ್ಜನ್ಯ ಎಸಗುತ್ತಿದೆ. ಮೊದಲು ಇದು ನಿಲ್ಲಬೇಕು. ಜನರ ಪರವಾಗಿ ಸರಕಾರ ನಿರ್ಧಾರ ತೆಗೆದುಕೊಳ್ಳಬೇಕೆಂದು” ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ರಮೇಶ್ ಮಾತನಾಡಿ, “ಸುಪ್ರೀಂ ಕೋರ್ಟ್ ನ ಆದೇಶದ ಅನ್ವಯ 2025 ಏಪ್ರಿಲ್‌ನಲ್ಲಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ಹಾಗೂ ವಿವಿಧ ಹಂತಗಳಲ್ಲಿ ನಿರ್ಮಾಣ ಹಂತದಲ್ಲಿರುವ, ಪೂರ್ಣಗೊಂಡಿರುವ ಕಟ್ಟಡಗಳಿಗೆ ಪೂರ್ಣ ಪ್ರಮಾಣ ಪತ್ರ (ಓ.ಸಿ) ಅಥವಾ ವಾಸಯೋಗ್ಯ ಪ್ರಮಾಣ ಪತ್ರ ನೀಡುವ ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಬೇಕು” ಎಂದು ಆಗ್ರಹಿಸಿದರು.
“ರಾಜ್ಯಾದ್ಯಂತ ಲಕ್ಷಾಂತರ ಗ್ರಾಹಕರು ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು, ಭೂ ಪರಿವರ್ತಿತ ಹಾಗೂ ಭೂ ಪರಿವರ್ತನೆಯಾಗದ ಪ್ರದೇಶಗಳು ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಿರುವ ಸ್ಥಳಗಲ್ಲಿ ಕಟ್ಟಡ ನಿರ್ಮಾಣ ಕಾರ್ಯಗಳನ್ನು ಬ್ಯಾಂಕ್‌ಗಳಿಂದ ಸಾಲ ಪಡೆದು ವಿವಿಧ ಹಂತಗಳಲ್ಲಿ ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದಲ್ಲಿ ರಾಜ್ಯದ ಲಕ್ಷಾಂತರ ನಾಗರಿಕರಿಗೆ ಆರ್ಥಿಕ, ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ, ಅರ್ಜಿ ಸಲ್ಲಿಸಿರುವ, ಮಂಜೂರಾತಿ ಪಡೆದಿರುವ ಕಾರ್ಯಾದೇಶಗೊಂಡಿರುವ ಕಟ್ಟಡಗಳಿಗೆ ಸೂಕ್ತ ವಿನಾಯಿತಿ ನೀಡುವ ಮೂಲಕ ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡಗಳ ಗ್ರಾಹಕರಿಗೆ ಅನುಕೂಲವಾಗುವಂತೆ ಸರಕಾರ ಕ್ರಮಕೈಗೊಳ್ಳಬೇಕೆಂದು” ಒತ್ತಾಯಿಸಿದರು.
ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ವಿ.ಚಂದ್ರಬಾಬು ಸೇರಿದಂತೆ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕಟ್ಟಡಗಳಿಗೆ ವಾಸಯೋಗ್ಯ ಪ್ರಮಾಣ ಪತ್ರದ ಬಗ್ಗೆ ಸ್ಪಷ್ಟತೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘವು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿತು. ಸಂಘದ ರಾಜ್ಯಾಧ್ಯಕ್ಷರಾದ ಸಿ.ರಮೇಶ್ ನೇತೃತ್ವದಲ್ಲಿ ಸಾವಿರಾರು ಸದಸ್ಯರು ಸರ್ಕಾರದ ವಿರುದ್ಧ ಭಿತ್ತಿ ಪತ್ರಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ಅಸಮಧಾನ ವ್ಯಕ್ತಪಡಿಸಿದರು.
ಪ್ರಮುಖ ಬೇಡಿಕೆಗಳು
- ಅಸ್ತಿತ್ವದಲ್ಲಿರುವ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಲು ಒಮ್ ಟೈಮ್ ವಿನಾಯಿತ ನೀಡಬೇಕು.
- ಸುಪ್ರೀಂ ಕೋರ್ಟ್ ಆದೇಶ ತೋರಿಸಿ ವಿದ್ಯುತ್ ಸಂಪರ್ಕ ನಿಲ್ಲಿಸುವುದು ನೀಡಬೇಕು.
- ಗುತ್ತಿಗೆದಾರು ಹಾಗೂ ಕಟ್ಟಡ ಮಾಲೀಕರಿಗೆ ಅನುಕೂಲ ಮಾಡಿಕೊಡಬೇಕು
- ಎಂ.ಎಸ್. ಎಂ. ಇ. ಕೈಗಾರಿಕೆಗಳಿಗೆ ಓಸಿಯಿಂದ ವಿನಾಯಿತ ನೀಡಬೇಕು.
ಪ್ರತಿಭಟನೆ ನಡೆಸುತ್ತಿರುವವರು ಯಾರು ನಮಗೆ ಬಸ್ ಉಚಿತವಾಗಿ ನೀಡಿ, ನಮ್ಮ ಖಾತೆಗೆ ಹಣ ಹಾಕಿ ಅಂತಾ ಕೇಳುತ್ತಿಲ್ಲ. ಬದಲಾಗಿ ನಮಗೆ ಕೆಲಸ ಮಾಡಲು ಅವಕಾಶ ನೀಡಿ ಎಂದು ಕೇಳುತ್ತಿದ್ದಾರೆ. ಆದರೆ, ಆಡಳಿತದಲ್ಲಿರುವ ಸರ್ಕಾರ ಓಸಿ, ಸಿಸಿ ಹೆಸರಿನಲ್ಲಿ ವಿದ್ಯುತ್ ಸಂಪರ್ಕ ನೀಡಿದೆ, ಜನರನ್ನು ಸುಲಿಗೆ ಮಾಡುತ್ತಿದೆ. ಇದು ಯಾವ ನ್ಯಾಯ.? ಮೊದಲು ಇವರ ಕಷ್ಟ ಪರಿಹಾರ ಮಾಡಿ.
ಎನ್.ರವಿಕುಮಾರ್, ವಿರೋಧ ಪಕ್ಷದ ಮುಖ್ಯ ಸಚೇತಕ, ವಿಧಾನ ಪರಿಷತ್



















