ಕಚೇರಿಯಲ್ಲಿ ಉಳಿತುಕೊಂಡೇ ಜಾತಿ ತೀರ್ಮಾನ, ಅಧಿಕಾರಿಗಳ ವಿರುದ್ದ ಆಕ್ರೋಶ,
ಜಿಲ್ಲಾಧಿಕಾರಿ ನಡೆ ಅನ್ಯಾಯದ ಕಡೆ ಎಂದು ಆರೋಪ….!
ಇಂಡಿ : ಅರ್ಜಿ ಸ್ವೀಕರಿಸಲ್ಲ, ಸ್ಥಾನಿಕ ಚೌಕಾಸಿ ಮಾಡಲ್ಲ, ಕಚೇರಿಯಲ್ಲಿ ಕುಳಿತುಕೊಂಡೇ ಜಾತಿ ನಿರ್ಧಾರ ಮಾಡುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಕಂಡು ಬಂತು.
ಇಂಡಿ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ತಳವಾರ- ಪರಿವಾರ ಸಮುದಾಯದ ಜನ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ತಳವರ ಸಮಾಜವನ್ನು ನಾಯಕ ಮತ್ತು ನಾಯಕಡ ಸಮುದಾಯದ ಪರ್ಯಾಯ ಪದಗಳೆಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ರಾಜ್ಯ ಸರ್ಕಾರ ಸಹ ಅರ್ಹರಿಗೆ ಜಾತಿ ಪ್ರಮಾಣ ಪತ್ರ ನೀಡಲು ಸುತ್ತೋಲೆ ಹೊರಡಿಸಿದೆ. ಆದರೆ ಅಧಿಕಾರಿಗಳು ಮಾತ್ರ ಅನವಶ್ಯಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಸಮಾಜದ ಮುಖಂಡರು ಆರೋಪಿಸಿದರು.
ತಳವಾರ ಸಮುದಾಯದ ಅರ್ಜಿಗಳನ್ನು ಸಕಾರಣ ನೀಡದೇ ತಿರಸ್ಕರಿಸಲಾಗುತ್ತಿದೆ. ರಾಜ್ಯದಲ್ಲಿ ಇರುವುದ ಒಂದೇ ತಳವಾರ. ನಾಯಕ ಮತ್ತು ನಾಯಕಡ ಸಮುದಾಯದ ಪರ್ಯಾಯ ಪದವೇ ಈ ತಳವಾರ. ಇದನ್ನು ಅರಿಯಬೇಕು. ಹಾಗೊಂದು ವೇಳೆ ಅಲ್ಲ ಎನ್ನುವುದಾದರೆ ಅದಕ್ಕೆ ಸಂಬಂಧಿಸಿದ ದಾಖಲೆ ನೀಡಬೇಕೆಂದು ಒತ್ತಾಯಿಸಿದರು. ತಳವಾರ ಸಮಾಜದ ಆಕ್ರೋಶ ಕ್ಕೆ ಮಣಿದ ಅಧಿಕಾರಿಗಳು ಸಾಂಕೇತಿಕವಾಗಿ ಸ್ಥಳದಲ್ಲಿಯೇ ಅರ್ಜಿ ಸ್ವೀಕರಿಸಿ ಇನ್ನುಳಿದ ಅರ್ಜಿಗಳನ್ನು ನಾಡಕಚೇರಿಗೆ ಸಲ್ಲಿಸಲು ತಿಳಿಸಿದರು.
ಡಾ. ಸುರೇಶ ವಿಜಯಪುರ, ಸೋಮು ಜಮಾದಾರ್, ಹಣಮಂತ ಜಮಾದಾರ್, ಮಹೇಶ ಯಂಕಂಚಿ, ಶಿವಶಂಕರ ಜಮಾದಾರ್, ಶ್ರೀಕಾಂತ್ ವಾಲಿಕಾರ, ಆನಂದ ವಾಲಿಕಾರ, ಸುರೇಶ ತಳವಾರ, ಸಾಯಬಣ್ಣ ವಾಲಿಕಾರ, ಕೊಟೆಪ್ಪ ನಾಲ್ವರ, ಭೀಮಣ್ಣ ತಾವರಖೇಡ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.