ರಾಯಚೂರು : ಇಂದಿನಿಂದ ಆರಂಭವಾಗಲಿರುವ ಎಸೆಸೆಲ್ಸಿ ಪರೀಕ್ಷೆಗೆ ಈಗಾಗಲೇ ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದು, ಪರೀಕ್ಷಾ ಸಿಬ್ಬಂದಿಗಳು ತಪಾಸಣೆ ಮಾಡಿ ವಿದ್ಯಾರ್ಥಿಗಳಿಗೆ ಕೊಠಡಿಗಳಿಗೆ ತೆರಳಲು ಅನುಕೂಲ ಮಾಡಿಕೊಡಲಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 114 ಪರೀಕ್ಷಾ ಕೇಂದ್ರಗಳನ್ನ ಸಿದ್ಧಗೊಳಿಸಲಾಗಿದೆ. ಒಂದು ಬೆಂಚ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳು ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 31,896 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವುದಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ.
ಅದರಲ್ಲಿ 16,725 ವಿದ್ಯಾರ್ಥಿಗಳು ಹಾಗೂ 15,171 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯುವರು. ಜಿಲ್ಲಾ ಕೇಂದ್ರದಲ್ಲೇ ಅತಿಹೆಚ್ಚು 9,051 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷಾ ಕೊಠಡಿಗಳಿಗೆ ಈಗಾಗಲೇ ಸ್ಯಾನಿಟೈಜ್ ಮಾಡಲಾಗಿದ್ದು, ಪರೀಕ್ಷೆ ಬರೆಯುವುದಕ್ಕೆ ಬರುವ ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯ.
ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವಾಗ ಪ್ರತಿ ವಿದ್ಯಾರ್ಥಿಯ ಥರ್ಮಲ್ ಪರೀಕ್ಷೆ ಹಾಗೂ ಕೈಗಳನ್ನು ಸ್ಯಾನಿಟೈಜ್ ಮಾಡಿಸಲಾಗುವುದು. ಇದಕ್ಕಾಗಿ ಆರೋಗ್ಯ ಇಲಾಖೆಯಿಂದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.