ಕ್ರೀಡೆ ಮಾನವ ಜೀವನದ ಅವಿಭಾಜ್ಯ ಅಂಗ-ಖಲೀಲ್ ಇಂಡಿಕರ
ಇಂಡಿ: ‘ಕ್ರೀಡೆ ಮಾನವ ಜೀವನದ ಅವಿಭಾಜ್ಯ ಅಂಗ, ನಿರಂತರ ಕ್ರೀಡಾ ಚಟುವಟಿಕೆಗಳು ನಮ್ಮ ಜೀವನಕ್ಕೆ ಹುಮ್ಮಸ್ಸು ನೀಡುತ್ತವೆ’ ಎಂದು ಸಾಮಾಜಿಕ ಕಾರ್ಯಕರ್ತ ಖಲೀಲ್ ಇಂಡಿಕರ ಹೇಳಿದರು.
ಬುಧವಾರದಂದು ನಗರದ ಶಮ್ಸ್ ಉರ್ದು ಮಾಧ್ಯಮ ಹಾಗೂ ಬಾಲ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ವಾರ್ಷಿಕ ಕ್ರೀಡೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆ ಮಾನವನಲ್ಲಿ ನಿರಂತರ ಕ್ರಿಯಾಶೀಲತೆಯ ಜೊತೆಗೆ ನವ ಚೈತನ್ಯವನ್ನು ಉಂಟು ಮಾಡುತ್ತದೆ. ಆರೋಗ್ಯವೇ ಭಾಗ್ಯ ಎಂಬಂತೆ ನಿರಂತರ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುವಿಕೆಯಿಂದ ಮುಪ್ಪಿನ ಸಮಯದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಮುಖ್ಯ ಶಿಕ್ಷಕ ಫಯಾಜ್ ಟಾಂಗೆವಾಲೆ ಮಾತನಾಡಿ, ಆಧುನಿಕ ಯುಗದಲ್ಲಿ ಮಾನವನ ಜೀವನ ಯಾಂತ್ರಿಕ ಜೀವನವಾಗಿದೆ. ವಿದ್ಯಾರ್ಥಿಗಳು ಪಠ್ಯಕ್ಕೆ ನೀಡುವ ಮಹತ್ವವನ್ನು ಕ್ರೀಡೆಗೂ ನೀಡಬೇಕು. ಕ್ರೀಡೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು.
ಪ್ಯಾರಡೈಸ್ ಸಾಮಾಜಿಕ ಸಂಘದ ಅಧ್ಯಕ್ಷ ಅಖಿಲ ಹವಾಲ್ದಾರ, ಅಬು ನ್ಯೂಸ್ ವರದಿಗಾರ ಹಜರತ್ ಅಲಿ ಮುಲ್ಲಾ, ಗುತ್ತಿಗೆದಾರರಾದ ಸಲೀಂ ಮೊಮಿನ್, ಷರೀಫ್ ತೋಳನೂರ, ಸಂಸ್ಥೆಯ ಕಾರ್ಯದರ್ಶಿ ಮಹ್ಮದ್ ಉಮೇರ ಅರಬ ಸೇರಿದಂತೆ ಶಾಲಾ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.


















