ಮನುಕುಲಕ್ಕೆ ಸನ್ಮಾರ್ಗ ತೋರಿದ ಸಿದ್ಧೇಶ್ವರ ಶ್ರೀಗಳು-ನಿಜಶರಣಾನಂದ ಸ್ವಾಮೀಜಿ
ವಿಜಯಪುರ: ಮನುಕುಲಕ್ಕೆ ಸುಂದರ ಬದುಕಿನ ದಾರಿ ತೋರಿದ ಜಗತ್ತಿನ ಶ್ರೇಷ್ಠ ಸಂತ ಸಿದ್ಧೇಶ್ವರ ಸ್ವಾಮೀಜಿಯವರ ಜೀವನ, ಚಿಂತನೆಗಳು ನಮ್ಮೆಲ್ಲರ ಜೀವನಕ್ಕೆ ಮಾರ್ಗದರ್ಶಿಯಾಗಿವೆ ಎಂದು ನಿಜಶರಣಾನಂದ ಸ್ವಾಮೀಜಿ
ಹೇಳಿದರು.
ಅವರು ತಾಲೂಕಿನ ನಾಗಠಾಣ ಗ್ರಾಮದ ಕಲ್ಲಯಾರೂಢ ಮಠದಲ್ಲಿ ಹಮ್ಮಿಕೊಂಡ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ 3ನೇ ಗುರುನಮನ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು.
ಅಧ್ಯಾತ್ಮದ ಮೇರು ಪರ್ವತ, ಸದ್ಗುಣಗಳ ಪ್ರತಿರೂಪವಾಗಿದ್ದ ಸಿದ್ದೇಶ್ವರ ಶ್ರೀಗಳು ಸರಳ ಜೀವನ, ಆಳವಾದ ಆಧ್ಯಾತ್ಮಿಕ ಜ್ಞಾನದೊಂದಿಗೆ ಜಾತಿ, ಮತ, ಪಂಥದ ಭೇದಭಾವವಿಲ್ಲದೆ ಎಲ್ಲರಿಗೂ ತತ್ವಶಾಸ್ತ್ರವನ್ನು ಅರ್ಥವಾಗುವ ಭಾಷೆಯಲ್ಲಿ ಪ್ರವಚನ ನೀಡಿ, ಮಾನವೀಯ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡಿದ್ದರು ಎಂದರು.
ಸಿದ್ದಪ್ರಸಾದ ಸ್ವಾಮೀಜಿ ಮಾತನಾಡಿ, ಸಿದ್ದೇಶ್ವರ ಶ್ರೀಗಳ ಜೀವನವೇ ಎಲ್ಲರಿಗೂ ಪ್ರೇರಣೆ. ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದ ಅವರನ್ನು ಕಂಡಾಗ ಚಿಂತೆ, ಕೋಪ-ತಾಪ, ಮರೆಯಾಗುತ್ತಿದ್ದವು ಎಂದು ಹೇಳಿದರು.
ಪ್ರಜ್ಞಾನಂದ ಸ್ವಾಮೀಜಿ ಮಾತನಾಡಿ, ಶ್ರೀಗಳ ತೆರೆದಿಟ್ಟ ಜೀವನ ಎಲ್ಲರ ಬದುಕಿಗೆ ದಾರಿದೀಪ. ಜತೆಗೆ ಅಮೂಲ್ಯವಾದ ಪುಸ್ತಕವೂ ಹೌದು. ಅವರು ಹಾಕಿಕೊಟ್ಟ ಸರಳತೆಯ ಮಾರ್ಗದಲ್ಲಿ ಸಾಗೋಣ ಎಂದು ಹೇಳಿದರು.
ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ,
ಸಂಕೀರ್ಣ ತಾತ್ವಿಕ ವಿಷಯಗಳನ್ನು ಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾಗಿ ವಿವರಿಸುವ ಅಸಾಧಾರಣ ಸಾಮರ್ಥ್ಯ ಹೊಂದಿದ್ದ ಸಿದ್ದೇಶ್ವರ ಶ್ರೀಗಳ ಜೀವನ ಮತ್ತು
ಸಂದೇಶವು ಜಗತ್ತಿಗೆ ದಾರಿದೀಪವಾಗಿದೆ ಎಂದು ಹೇಳಿದರು.
ಶರಣಬಸು ತಂಗಡಗಿ, ಶಂಕರ ಹುಣಶ್ಯಾಳ, ಅಶೋಕ ಲೋಣಿ, ಪರಮಾನಂದ ನಾವಿ, ಪ್ರಕಾಶ ಹಂಡಿ, ಹಣಮಂತ ಬಕಾಟಿ, ಸುರೇಶ ಮಸಳಿ ಸೇರಿದಂತೆ ಗ್ರಾಮಸ್ಥರು, ತಾಯಂದಿರು, ಮಕ್ಕಳು ಭಾಗವಹಿಸಿದ್ದರು.


















