ಸಿದ್ದರಾಮಯ್ಯ ಸರ್ಕಾರದ್ದು ದಿಕ್ಕು ದೆಸೆಯಿಲ್ಲದ ‘ಶೂನ್ಯ ಪ್ರಗತಿ’ ಬಜೆಟ್: ಸಂತೋಷಕುಮಾರ ಬಾದರಬಂಡಿ ಟೀಕೆ
ಮುದ್ದೇಬಿಹಾಳ: ಸಿದ್ದರಾಮಯ್ಯ ಅವರು ಮಂಡಿಸಿರುವ ರಾಜ್ಯ ಬಜೆಟ್ ಯಾವುದೇ ದೂರದೃಷ್ಟಿಯಿಲ್ಲದ, ಶೂನ್ಯ ಪ್ರಗತಿಯ ಬಜೆಟ್ ಆಗಿದೆ. ಇದು ರಾಜ್ಯವನ್ನು ಸಾಲದ ಶೂಲಕ್ಕೆ ತಳ್ಳುವ ಮೂಲಕ ಆರ್ಥಿಕ ಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ,” ಎಂದು ಬಿಜೆಪಿ ಯುವ ಮುಖಂಡ ಸಂತೋಷಕುಮಾರ ಪ. ಬಾದರಬಂಡಿ ಕಿಡಿಕಾರಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್ನ ಲೋಪದೋಷಗಳನ್ನು ಅಂಕಿ-ಅಂಶಗಳ ಸಹಿತ ವಿವರಿಸಿದರು.
ಸಾಲದ ಸುಳಿಯಲ್ಲಿ ರಾಜ್ಯ: ಆರ್ಥಿಕ ಹಿನ್ನಡೆಯ ಭೀತಿ ₹1.32 ಲಕ್ಷ ಕೋಟಿ ಸಾಲ ಮಾಡಿ, ಸುಮಾರು ₹25 ಸಾವಿರ ಕೋಟಿ ಹೊಸ ತೆರಿಗೆಯನ್ನು ಜನಸಾಮಾನ್ಯರ ಮೇಲೆ ಹೇರಲಾಗಿದೆ. ₹22 ಸಾವಿರ ಕೋಟಿ ಕೊರತೆಯ ಬಜೆಟ್ ಮಂಡಿಸುವ ಮೂಲಕ ರಾಜ್ಯವನ್ನು ಅಭಿವೃದ್ಧಿಯಲ್ಲಿ 15 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯಲಾಗುತ್ತಿದೆ. 17 ಬಾರಿ ಬಜೆಟ್ ಮಂಡಿಸಿದ ಅನುಭವವಿರುವ ಮುಖ್ಯಮಂತ್ರಿಯಿಂದ ಇಂತಹ ಕಳಪೆ ಬಜೆಟ್ ನಿರೀಕ್ಷಿಸಿರಲಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೀರಾವರಿ ಕ್ಷೇತ್ರಕ್ಕೆ ಅನ್ಯಾಯ ”ರಾಜ್ಯದ ಜೀವನಾಡಿಯಾದ ನೀರಾವರಿ ಕ್ಷೇತ್ರಕ್ಕೆ ಕೇವಲ ₹22 ಸಾವಿರ ಕೋಟಿ ಮೀಸಲಿಡಲಾಗಿದೆ. ಅದರಲ್ಲೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ಕನಿಷ್ಠ ₹25 ಸಾವಿರ ಕೋಟಿ ಮೀಸಲಿಡಬೇಕಿತ್ತು. ಆದರೆ ಬಜೆಟ್ನಲ್ಲಿ ಯಾವುದೇ ಗಂಭೀರ ಅನುದಾನ ನೀಡಿಲ್ಲ. ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳಿಗೂ ಅಗತ್ಯವಿರುವಷ್ಟು ಹಣ ನೀಡದೆ ಕಡೆಗಣಿಸಲಾಗಿದೆ,” ಎಂದು ಅವರು ದೂರಿದರು.
ಒಳ ಮೀಸಲಾತಿ: ಸರ್ಕಾರದ ಗೊಂದಲಕ್ಕೆ ಆಕ್ರೋಶ
ಒಳ ಮೀಸಲಾತಿ ವಿಚಾರದಲ್ಲಿ ಸರ್ಕಾರದ ನಿಲುವನ್ನು ಪ್ರಶ್ನಿಸಿದ ಅವರು, “ಸಚಿವರ ನಡುವಿನ ಗೊಂದಲದಿಂದಾಗಿ ಪರಿಶಿಷ್ಟ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಬೆಳಗಾವಿ ಅಧಿವೇಶನದಲ್ಲಿ ಕಾಯ್ದೆಗೆ ಒಪ್ಪಿಗೆ ಪಡೆದು, ರಾಜ್ಯಪಾಲರ ಅಂಕಿತವಾದ ಮೇಲೂ ಮೀಸಲಾತಿ ನೀಡಲು ಸರ್ಕಾರ ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಮೀಸಲಾತಿ ಪ್ರಮಾಣವನ್ನು ಶೇ. 17ಕ್ಕೆ ಏರಿಸಿ ಈಗ ಸೌಲಭ್ಯ ಕೊಡದಿದ್ದರೆ ಬಿಜೆಪಿ ವತಿಯಿಂದ ತೀವ್ರ ಹೋರಾಟ ಸಂಘಟಿಸಲಾಗುವುದು,” ಎಂದು ಎಚ್ಚರಿಕೆ ನೀಡಿದರು.