ಸಿದ್ಧಲಿಂಗ ಮಹಾರಾಜರ ಪುಣ್ಯಸ್ಮರಣೋತ್ಸವ : ಹದಿನೈದು ಭಜನಾ ತಂಡ ಕಲಾ ಪ್ರದರ್ಶನ.
ಇಂಡಿ : ತಾಲೂಕಿನ ಸುಕ್ಷೇತ್ರ ಲಚ್ಯಾಣದಲ್ಲಿ ಲಿಂಗೈಕ್ಯ ಶ್ರೀ
ಸಿದ್ದಲಿಂಗ ಮಹಾರಾಜರ 96ನೇ ಪುಣ್ಯಾರಾಧನೆ ಅಂಗವಾಗಿ ಶುಕ್ರವಾರ ರಾತ್ರಿ ನಾಡಿನ ನಾನಾ ಭಾಗದ ಭಜನಾ ಕಲಾತಂಡದವರು ಸೇರಿದಂತೆ ಒಟ್ಟು ಹದಿನೈದು ಭಜನಾ ತಂಡಗಳು ಬಿಡಿ ಬಿಡಿ ಯಾಗಿ ಏಕಕಾಲಕ್ಕೆ ಭಜನಾ ಕಲೆ ಪ್ರದರ್ಶಿಸಿ ಇಡೀ ರಾತ್ರಿ ಜಾಗರಣೆ ನಡೆಸಿ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.
ಶಿವಮೊಗ್ಗದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ
ಮಹಾ ಸ್ವಾಮೀಜಿ, ಬಂಥನಾಳದ ಶ್ರೀ ಡಾ. ವೃಷಭಲಿಂಗೇಶ್ವರ ಮಹಾ ಶಿವಯೋಗಿಗಳು, ಹಳ್ಳಿಂಗಳಿಯ ಶ್ರೀ ಶಿವಾನಂದ ಮಹಾಸ್ವಾಮೀಜಿ, ಗೋಳಸಾರದ ಶ್ರೀ ಅಭಿನವ ಪುಂಡಲಿಂಗ ಮಹಾ ಸ್ವಾಮೀಜಿ, ಜಕನೂರಿನ ಶ್ರೀ ಸಿದ್ದಲಿಂಗ ದೇವರು,
ಹೂವಿನ ಹಿಪ್ಪರಗಿಯ ದ್ರಾಕ್ಷಾಯಣಿ ಅಮ್ಮನವರು,
ತುಂಗಳದ ಅನಸೂಯಾದೇವಿಯವರ ಸಾನಿಧ್ಯದಲ್ಲಿ
ನಡೆದ ಈ ಕಾರ್ಯಕ್ರಮ ಸ್ಥಳೀಯ ಕಲಾವಿದರ
ಮಡಿಭಜನೆಯೊಂದಿಗೆ ಪ್ರಾರಂಭವಾಯಿತು.
ಬಳಿಕ ಇಲ್ಲಿನ ಕಮರಿಮಠದ ಒಳ ಹಾಗೂ ಹೊರ
ಆವರಣದಲ್ಲಿ ನೆರೆಯ ಮಹಾರಾಷ್ಟ್ರ ರಾಜ್ಯದ ಚಣಿಗಾವ್,
ಮೊಸಲಗಿ, ಕೂಡಲ, ನೆರೆಯ ಕಲಬುರ್ಗಿ ಜಿಲ್ಲೆಯ ಗೌರ,
ಇಂಡಿ ತಾಲೂಕಿನ ಲೋಣಿ ಕೆ.ಡಿ, ತಡವಲಗಾ, ಲೋಣಿ ಬಿಕೆ, ಸೇರಿದಂತೆ ವಿವಿಧ ಗ್ರಾಮದ ಬಜನಾ ಕಲಾ ತಂಡದವರು ಸ್ವಂತ ಸೌಂಡ್ ಸಿಸ್ಟಮ್,ಹಾರ್ಮೋನಿಯಂ, ಡಿಮಡಿ, ತಾಳದೊಂದಿಗೆ ಬೀಡು ಬಿಟ್ಟು ರಾತ್ರಿಯಿಂದ ಬೆಳಗಾಗುವವರೆಗೂ ಪ್ರತ್ಯೇಕವಾಗಿ ಭಜನೆ ನಡೆಸಿ ಜಾಗರಣೆ ನಡೆಸಿದರು.
ಈ ಬಾರಿ ಯಾದಗಿರಿ, ಕಲಬುರಗಿ ಜಿಲ್ಲೆಯ ಅಕ್ಕನ ಬಳಗ
ತಂಡದವರು ಶ್ರೀ ಸಿದ್ದಲಿಂಗ ಮಹಾರಾಜರ ಕುರಿತು ಭಜನಾ ಪದಗಳನ್ನು ಹಾಡಿ ಜಾಗರಣೆ ನಡೆಸಿದ್ದು ಇಲ್ಲಿನ ಮತ್ತೊಂದು ವಿಶೇಷ ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶ್ ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಉತ್ಸವದಲ್ಲಿ ಪಾಲ್ಗೊಂಡ ಸಹಸ್ರಾರು ಭಕ್ತರಿಗೆ ಮಠದಲ್ಲಿ ಇಡೀ ರಾತ್ರಿ, ಹಗಲು ನಿರಂತರ ಬೃಹತ್ ಅನ್ನ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು.