ಅಫಜಲಪುರ: ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಂಪ್ಯೂಟರ್ ಜ್ಞಾನವಿಲ್ಲದಿದ್ದರೆ ಯಾವುದಕ್ಕೂ ಪ್ರಯೋಜಕ್ಕೆ ಬಾರದಂತಾಗಲಿದೆ ಎನ್ನುವ ಮಾತಿದೆ. ಹೀಗಾಗಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಆರಂಭಿಸಿದ್ದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂದು ಬಡದಾಳ ಮಠದ ಡಾ. ಅಭಿನವ ಚನ್ನಮಲ್ಲ ಶಿವಾಚಾರ್ಯರು ಹೇಳಿದರು.
ತಾಲೂಕಿನ ಬಡದಾಳ ಗ್ರಾಮದಲ್ಲಿ ಜ್ಞಾನ ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಗ್ರಾಮದ ಯುವಕ, ಸಮಾಜ ಸೇವಕ ಶಿವು ಪರೀಟ್ ಅವರಿಗೆ ಬಡ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ ಕೊಡಿಸಬೇಕೆನ್ನುವ ಮನಸ್ಸು ಪರಮಾತ್ಮ ಕೊಟ್ಟಿದ್ದಾನೆ. ಹೀಗಾಗಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಬದುಕು ರೂಪಿಸುವುದಕ್ಕಾಗಿ ತಮ್ಮ ಶ್ರಮದ ಹಣದಲ್ಲಿ ಉಚಿತ ಶಿಕ್ಷಣ ನೀಡಲು ಮುಂದಾಗಿರುವುದು ನಮಗೆ ಬಹಳ ಖುಷಿ ಕೊಟ್ಟಿದೆ ಎಂದ ಅವರು ಈ ತರಬೇತಿ ಕೇಂದ್ರ ಗ್ರಾಮದ ವಿದ್ಯಾರ್ಥಿಗಳಿಗೆ ಮರಿಚಿಕೆಯಾಗಿದ್ದ ಕಂಪ್ಯೂಟರ್ ತರಬೇತಿಯನ್ನು ಅಚ್ಚುಕಟ್ಟಾಗಿ ನೀಡುವ ಮೂಲಕ ಅವರ ಬದುಕು ಬದಲಿಸುವ ಕೆಲಸ ಮಾಡಲಿ ಎಂದು ಹಾರೈಸಿದರು.
ಪತ್ರಕರ್ತ ರಾಹುಲ್ ದೊಡ್ಮನಿ ಮಾತನಾಡುತ್ತಾ ನಮ್ಮೂರಿನ ಯುವಕ, ಸಮಾಜ ಸೇವಕ ಶಿವು ಪರೀಟ್ ಅವರು ತಮ್ಮ ದುಡಿಮೆಯಿಂದ ಉಳಿದ ಅಲ್ಪಸ್ವಲ್ಪ ಹಣವನ್ನು ಹೊಂದಿಸಿ ತಮ್ಮ ಸಂಸಾರಿಕ ಬದುಕನ್ನು ನಿಭಾಯಿಸುವುದರ ಜೊತೆಗೆ ಗ್ರಾಮದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಅದರಲ್ಲೂ ಕಂಪ್ಯೂಟರ್ ಕಲಿಕೆಗಾಗಿ ನೂತನವಾಗಿ ಜ್ಞಾನ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಆರಂಭಿಸಿ ಉಚಿತ ಶಿಕ್ಷಣ ನೀಡಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ, ಇವರಿಗೆ ಗ್ರಾಮದ ಸೇವಾ ಮನೋಭಾ ಉಳ್ಳವರು ಸಹಕಾರ ನೀಡಲಿ, ಜ್ಞಾನ ಕಂಪ್ಯೂಟರ್ ತರಬೇತಿ ಕೇಂದ್ರ ಬರುವ ದಿನಗಳಲ್ಲಿ ಹೆಮ್ಮರವಾಗಿ ಬೆಳೆದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬದುಕು ರೂಪಿಸುವ ಕೆಲಸ ಮಾಡಲಿ ಎಂದು ಹಾರೈಸಿದರು. ತರಬೇತಿ ಕೇಂದ್ರದ ರೂವಾರಿ ಶಿವು ಪರೀಟ್ ಮಾತನಾಡುತ್ತಾ ನಾನು ಬಡತನದಲ್ಲಿ ಬೆಳೆದು ಬಂದವನು, ಅನೇಕ ಕಷ್ಟಗಳನ್ನು ಎದುರಿಸಿ ಶಿಕ್ಷಣ ಪಡೆದು ಈಗ ಸ್ವಂತ ವ್ಯಾಪಾರ ಮಾಡುತ್ತಿದ್ದೇನೆ. ಆದರೆ ನಮ್ಮೂರಿನ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನೋಡಿದಾಗ ಮನಸ್ಸಿಗೆ ಬಹಳ ನೋವಾಗುತ್ತಿತ್ತು. ಎಲ್ಲಾ ಪ್ರತಿಭೆ ಇದ್ದರೂ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎನ್ನುವ ಅಳುಕು ಕಾಡುತ್ತಿತ್ತು. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಇಲ್ಲದಿದ್ದರೆ ಎಷ್ಟು ಕಲಿತರೂ ವ್ಯರ್ಥ ಎನ್ನುವ ಮಾತಿದೆ ಹೀಗಾಗಿ ನನ್ನ ಕೈಲಾದ ಸಹಾಯ ಮಾಡಬೇಕು, ನಮ್ಮೂರಿನ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ ಕೊಡಿಸಬೇಕೆಂದು ನಿರ್ಧರಿಸಿ ನೂತನವಾಗಿ ಜ್ಞಾನ ಕಂಪ್ಯೂಟರ್ ತರಬೇತಿ ಕೇಂದ್ರ ಆರಂಭಿಸಿದ್ದೇನೆ. ಇದು ನನ್ನ ಬಹಳ ವರ್ಷಗಳ ಕನಸಾಗಿದ್ದು ಈಗ ನನಸಾಗುತ್ತಿದೆ. ಈ ತರಬೇತಿ ಕೇಂದ್ರದಲ್ಲಿ ಬೇಸಿಕ್ ಕಂಪ್ಯೂಟರ್ ತರಬೇತಿಯನ್ನು ಮೂರು ತಿಂಗಳ ವರೆಗೆ ನೀಡಲಾಗುತ್ತದೆ. ಅದಾದ ಬಳಿಕ ಮತ್ತೊಂದು ತಂಡವಾಗಿ ಹೆಚ್ಚಿನ ತರಬೇತಿ ನೀಡಲಾಗುತ್ತದೆ. ಪ್ರಾಥಮಿಕ, ಪ್ರೌಢ ಹಾಗೂ ಉನ್ನತ ವ್ಯಾಸಂಗ ಮಾಡಿದ ಎಲ್ಲಾ ವಿದ್ಯಾರ್ಥಿಗಳು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು. ಇಂದಿನಿಂದಲೇ ಪ್ರವೇಶಗಳು ಪ್ರಾರಂಭವಾಗಿದ್ದು ಸೋಮವಾರದಿಂದ ತರಬೇತಿಯನ್ನು ಪ್ರಾರಂಭ ಮಾಡಲಾಗುತ್ತದೆ. ನನ್ನ ಈ ಪ್ರಯತ್ನಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಡಾ. ರೇವಣಸಿದ್ದ ಚರಾಟೆ, ಘೋಷಯ್ಯ ಸ್ವಾಮಿ, ಹಣಮಂತ ಡಬ್ಬಿ, ಗ್ರಾ.ಪಂ ಸದಸ್ಯ ನಾಗೇಶ ಭತ್ತಾ, ಪ್ರಮುಖರಾದ ಶರಣಬಸಪ್ಪ ಬಶೆಟ್ಟಿ, ಧನರಾಜ ಮೇತ್ರೆ, ಬಸು ನಿಂಬಾಳ, ಶಿವಯ್ಯ ಸ್ವಾಮಿ, ಶರಣು ಪರೀಟ್, ನಾಗಣ್ಣ ಪರೀಟ್, ರವಿ ಮಂಗಳೂರ ಸೇರಿದಂತೆ ಅನೇಕರು ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.