ರಾಯಚೂರು: ಕೊಪ್ಪಳ-ರಾಯಚೂರು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಬಯ್ಯಾಪುರ 427 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ಅವರು 2,942 ಮತಗಳನ್ನು ಪಡೆದರೆ, ಶರಣಗೌಡ ಬಯ್ಯಾಪುರ 3,369 ಮತಗಳನ್ನು ಪಡೆದು ಜಯ ಸಾಧಿಸಿದರು.
ರಾಯಚೂರು ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಹಿಂದೆ ಒಂದು ಬಾರಿ ಮಾತ್ರ ಬಿಜೆಪಿ ಸಾಧಿಸಿದ್ದನ್ನು ಬಿಟ್ಟರೆ, ನಿರಂತರವಾಗಿ ಕಾಂಗ್ರೆಸ್ ಗೆಲುವು ಸಾಧಿಸುತ್ತಾ ಬಂದಿದೆ. ಇದೀಗ ಕಾಂಗ್ರೆಸ್ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ಸಹೋದರನ ಪುತ್ರ ಶರಣಗೌಡ ಬಯ್ಯಾಪುರ. ಸಕ್ರಿಯ ರಾಜಕಾರಣದಿಂದ ದೂರ ಇದ್ದು, ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಾ ಬಂದಿದ್ದರು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಚಿಕ್ಕಪ್ಪನ ಪರ ಪ್ರಚಾರ ಮಾಡುತ್ತಿದ್ದರು. ಈಗ ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಆಗುತ್ತಿದ್ದಂತೆ, ಶರಣಗೌಡ ಅವರು ಹೆಸರು ಹೆಚ್ಚು ಪ್ರಚಲಿತಕ್ಕೆ ಬಂದಿತ್ತು.
ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದ ಗೆಲುವಿನ ಭದ್ರಕೋಟೆ ಬಿಟ್ಟುಕೊಡಬಾರದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ, ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಭೋಸರಾಜ, ಹಂಪನಗೌಡ ಬಾದರ್ಲಿ, ಬಸನಗೌಡ ಬಾದರ್ಲಿ, ಬಸವರಾಜ ಪಾಟೀಲ ಇಟಗಿ, ಶಾಸಕರಾದ ಬಸನಗೌಡ ದದ್ದಲ, ಡಿ.ಎಸ್.ಹುಲಗೇರಿ, ಬಸನಗೌಡ ತುರ್ವಿಹಾಳ ಸೇರಿದಂತೆ ಪಕ್ಷದ ಮುಖಂಡರು, ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಒಗ್ಗಟ್ಟಾಗಿ ಪಕ್ಷದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಮತದಾನ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಜೆಡಿಎಸ್ ಕೂಡಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದು ಕೂಡಾ ಗೆಲುವಿಗೆ ಅನುಕೂಲವಾಯಿತು.
ಸಿಹಿಹಂಚಿ ಸಂಭ್ರಮ: ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಿದ್ದಂತೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ ಅವರಿಗೆ ಶಾಸಕರಾದ ಬಸನಗೌಡ ದದ್ದಲ ಹಾಗೂ ಡಿ.ಎಸ್.ಹುಲಗೇರಿ ಅವರು ಸಿಹಿ ತಿನ್ನಿಸಿದರು. ಕಾರ್ಯಕರ್ತರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಮತ ಎಣಿಕೆ ಕೇಂದ್ರದ ಹೊರಗಡೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಗುಲಾಲು ಎರಚಿ, ವಿಜಯೋತ್ಸವ ಆಚರಿಸಿದರು.
ಬಿಜೆಪಿಗೆ ಕೈಕೊಟ್ಟ ನಿರೀಕ್ಷೆ: ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು ಸ್ಥಳೀಯ ಸಂಸ್ಥೆಗಳ ಮತದಾರರು ಮತ ನೀಡಿ ಗೆಲ್ಲಿಸುತ್ತಾರೆ ಎಂದು ಭಾರಿ ನಿರೀಕ್ಷೆಯೊಂದಿಗೆ ಹೇಳಿಕೆಗಳನ್ನು ನೀಡಿದ್ದ ಬಿಜೆಪಿ ನಾಯಕರ ನಿರೀಕ್ಷೆ ಕೈಕೊಟ್ಟಿದೆ.
ದೇವದುರ್ಗ ಶಾಸಕ ಶಿವನಗೌಡ ನಾಯಕ ಅವರು ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವುದಕ್ಕಾಗಿ ಉತ್ಸಾಹದಿಂದ ತೊಡಗಿಸಿಕೊಂಡಿದ್ದರು. ಅಭ್ಯರ್ಥಿ ಆಯ್ಕೆ ಹಾಗೂ ಪ್ರಚಾರದಲ್ಲಿ ತಮ್ಮದೇ ಆದ ಯೋಜನೆ ರೂಪಿಸಿಕೊಂಡಿದ್ದರು. ವಿಶೇಷವೆಂದರೆ, ಹೊರಜಿಲ್ಲೆಯ ಅಭ್ಯರ್ಥಿಯಾಗಿದ್ದರೂ ಸಾಕಷ್ಟು ಮತಗಳನ್ನು ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಆದರೆ, ಗೆಲುವಿನ ಗುರಿ ತಲುಪುವುದಕ್ಕೆ ಸಾಧ್ಯವಾಗಲಿಲ್ಲ.