ರಾಯಚೂರು : ರಾಜ್ಯ ಬಿಜೆಪಿ ಸರಕಾರದ ಅರಾಜಕತೆಯನ್ನು ಕೊನೆಗೊಳಿಸಲು ಆಗ್ರಹಿಸಿ ರಾಯಚೂರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ SDPI ಯಿಂದ ಪ್ರತಿಭಟನೆ ಮಾಡಲಾಯಿತು.
ರಾಜ್ಯದಲ್ಲಿ ಸಂಘ ಪರಿವಾರ ಸಂಘಟನೆಗಳು ಕೋಮುಗಲಭೆ ಅರಾಜಕತ, ಧರ್ಮ – ಧರ್ಮಗಳ ನಡುವೆ ದ್ವೇಷ ಉಂಟುಮಾಡಿ ಆ ಮೂಲಕ ಕೋಮು ಗಲಭೆ ನಡೆಸಲು ಪ್ರಯತ್ನಿಸುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ನಮ್ಮ ದೇಶ ಭಾರತವೂ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ದೇಶವಾಗಿದ್ದು ಅದರಲ್ಲೂ ಕರ್ನಾಟಕ ರಾಜ್ಯವು ತನ್ನ ವೈವಿದ್ಯಾಮಾಯವಾದ ಸಂಸ್ಕೃತಿ, ಸಾಮಾಜಿಕ ಜೀವನ, ಶಿಕ್ಷಣ, ಆರೋಗ್ಯ, ತನ್ನ ವಿಶಿಷ್ಟವಾದ ನೈಸರ್ಗಿಕವಾದ ಸಂಪತ್ತುಗಳಿಂದ ಬಹಳ ಪ್ರಸಿದ್ದಿಯನ್ನು ಪಡೆದಿದ್ದು ರಾಜ್ಯದಲ್ಲಿ ಅನೇಕ ಶೈಕ್ಷಣಿಕ ಸಂಸ್ಥೆಗಳು, ಮಠ, ಮಸೀದಿ, ಮಂದಿರಗಳು ಕರ್ನಾಟಕ ರಾಜ್ಯದ ಐಕ್ಯತೆಯನ್ನು ಪ್ರತಿಪಾದಿಸುತ್ತಿದ್ದು ಹಿಂದೂ ಮುಸ್ಲಿಂ, ಪಾರ್ಸಿ, ಕ್ರೈಸ್ತ, ಜೈನ, ಸಿಕ್ಕರೂ ಅನ್ಯೂನ್ಯತೆ ಹಾಗೂ ಸೌಹಾರ್ದತೆಯಿಂದ ಜೀವಿಸುತ್ತಿದ್ದಾರೆ.
ರಾಷ್ಟ್ರ ಕವಿ ಕುವೆಂಪು, ಶಿಶುನಾಳ ಶರೀಫ, ಟಿಪ್ಪು ಸುಲ್ತಾನ್, ರವರೆಂಟ್ ಕಿಟೆಲ್, ಬಸವಣ್ಣ, ಶರಣರು, ಸಂತರು, ಸೂಫಿಗಳು ಈ ಕರ್ನಾಟಕ ರಾಜ್ಯಕ್ಕೆ ಸೌಹಾರ್ದತ ಮತ್ತು ಸಹೋದರತೆಗೆ ನೀಡಿದ ಕೊಡುಗೆ ಅನನ್ಯವಾಗಿದೆ.
ಇಂತಹಾ ವೈವಿದ್ಯಮಯದಿಂದ ಕೂಡಿದ ಕರ್ನಾಟಕದಲ್ಲಿ ಜಾತಿ ಜಾತಿಗಳ ಹಾಗೂ ಧರ್ಮ ಧರ್ಮಗಳ ನಡುವೆ ದ್ವೇಷವನ್ನು ಬಿತ್ತಿ ಶತಮಾನಗಳಿಂದ ಕರ್ನಾಟಕದಲ್ಲಿ ಜನರು ಪಾಲಿಸಿಕೊಂಡು ಬಂದಿದ್ದ ಶಾಂತಿ ಸೌಹಾರ್ದತೆಯನ್ನು ಹಾಳು ಮಾಡಲು ಸಂಘ ಪರಿವಾರದ ಸಂಘಟನೆಗಳು ಪ್ರಯತ್ನಪಡುತ್ತಿವೆ. ಇದಕ್ಕೆ ಪುಷ್ಟಿ ಕೊಡುವಂತಹ ವಿದ್ವೇಷಕಾರಿ ದ್ವೇಷ ಪ್ರಭಾಷಣಗಳು, ಹೇಳಿಕೆಗಳು ಪುಂಕಾನುಪುಂಕವಾಗಿ ಸಂಘ ಪರಿವಾರದ ನಾಯಕರು ಮಾಡುತ್ತಿದ್ದಾರೆ.
ಉದಾಹರಣೆಗೆಯಾಗಿ ಕರ್ನಾಟಕದಲ್ಲಿ ನಡೆದಿದ್ದ ಹಿಜಾಬ್ ವಿವಾದವು ಉಡುಪಿಯಲ್ಲಿ ಆರಂಭಗೊಂಡಿದ್ದು ಅದನ್ನು ಕರ್ನಾಟಕ ಘನವೆತ್ತ ಸರ್ಕಾರದ ಉಡುಪಿ ಶಾಸಕ ರಘುಪತಿ ಭಟ್, ಬಿಜೆಪಿ ಹಾಗೂ ಸಂಘಪರಿವಾರದವರು ಈ ವಿಚಾರವನ್ನು ಉದ್ವಿಗ್ನಗೊಳಿಸಿ ಹಿಂದೂ ವಿದ್ಯಾರ್ಥಿಗಳು, ಹಿಜಾಬ್ ವಿರೋಧಿಸಿ ಶಾಲೆಗಳಿಗೆ ಕೇಸರಿ ಶಾಲುಗಳನ್ನು ಧರಿಸಿ ತರಗತಿಗೆ ಹಾಜರಾಗುವಂತೆ ಪ್ರೇರಣೆ ನೀಡಿ ಆ ಮೂಲಕ ಶಾಲೆಗಳಲ್ಲಿ ಹಿಂದೂ ಮುಸ್ಲಿಂ ಎಂಬ ಕೋಮು ವಿಭಜನೆಯನ್ನು ವಿದ್ಯಾರ್ಥಿಗಳ ನಡುವೆ ಮಾಡಿದ್ದಾರೆ.
ಎರಡನೆಯದಾಗಿ ಮಾರ್ಚ್ ಹಾಗೂ ಎಪ್ರಿಲ್ ತಿಂಗಳುಗಳಲ್ಲಿ ಹೆಚ್ಚಿನ ಊರುಗಳಲ್ಲಿ ಜಾತ್ರೆ ಹಾಗೂ ಉರೂಸ್ಗಳು ನಡೆಯುತ್ತಿದ್ದು ಸಂಘಪರಿವಾರದ ಸಂಘಟನೆಗಳು ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶವಿಲ್ಲ ಎಂದು ಸಾರ್ವಜನಿಕವಾಗಿ ಸಾರಿ ಹೇಳುತ್ತಿರುವ ಘಟನೆಗಳು ಸಾಕಷ್ಟು ನಡೆಯುತ್ತಿದ್ದರೂ ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.