ಶಾಲೆಗಳು ಮಕ್ಕಳಲ್ಲಿಶಿಸ್ತು, ಸಂಸ್ಕಾರ ಹಾಗೂ ಜೀವನ ಮೌಲ್ಯಗಳನ್ನು ಬೆಳೆಸುವ ಪವಿತ್ರ ಕೇಂದ್ರ
ವಿಜಯಪುರ: ನಗರದ ಸಿಕ್ಯಾಬ್ ಆಂಗ್ಲ ಮಾಧ್ಯಮ ಕೆಜಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ, ನವರಸಪುರದ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಾಗಲಕೋಟೆ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಸೋಮಲಿಂಗ ಗೆನ್ನೂರ ಮಾತನಾಡಿ, ಶಾಲೆಗಳು ಮಕ್ಕಳಲ್ಲಿ ಶಿಸ್ತು, ಸಂಸ್ಕಾರ ಹಾಗೂ ಜೀವನ ಮೌಲ್ಯಗಳನ್ನು ಬೆಳೆಸುವ ಪವಿತ್ರ ಕೇಂದ್ರಗಳಾಗಿವೆ ಎಂದು ಹೇಳಿದರು. ಮಕ್ಕಳು ದೊಡ್ಡ ಗುರಿಗಳನ್ನು ಹೊಂದಿ, ಪರಿಶ್ರಮದಿಂದ ಓದಿ ಉನ್ನತ ಸಾಧನೆಗಳನ್ನು ಮಾಡಬೇಕು ಎಂದು ಕರೆ ನೀಡಿದರು. ಮೊಬೈಲ್ ಫೋನ್‌ಗಳ ಅತಿಯಾದ ಬಳಕೆ ಮಕ್ಕಳ ಭವಿಷ್ಯಕ್ಕೆ ಮಾರಕವಾಗುತ್ತಿರುವುದರಿಂದ, ಪೋಷಕರು ಈ ಕುರಿತು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಸಿಕ್ಯಾಬ್ ಎ.ಆರ್.ಎಸ್. ಇನಾಮದಾರ ಮಹಿಳಾ ಮಹಾವಿದ್ಯಾಲಯದ ಆಡಳಿತ ಮಂಡಳಿ ಚೇರ್ಮನ್ ರಿಯಾಜ್ ಫಾರೂಖಿ ಮಾತನಾಡಿ, ಇಂದಿನ ಯುಗದಲ್ಲಿ ಮೊಬೈಲ್ ಫೋನ್‌ಗಳು ಎಷ್ಟು ಉಪಯುಕ್ತವೋ ಅಷ್ಟೇ ಹಾನಿಕಾರಕವಾಗಿವೆ ಎಂದರು. ಮಕ್ಕಳು ಮೊಬೈಲ್ ಬಳಕೆಯನ್ನು ನಿಯಂತ್ರಿಸಿ ಓದು, ಕ್ರೀಡೆ ಹಾಗೂ ಸೃಜನಶೀಲ ಚಟುವಟಿಕೆಗಳತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು. ವಿಜ್ಞಾನ ಮತ್ತು ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದರಿಂದ, ಅದಕ್ಕೆ ತಕ್ಕಂತೆ ಜ್ಞಾನಾರ್ಜನೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ತಹಮೀನಾ ಕೋಲಾರ ಮಾತನಾಡಿ, ಸಾವಿತ್ರಿಬಾಯಿ ಪುಲೆ ಅವರು ದೇಶದ ಮೊದಲ ಮಹಿಳಾ ಶಿಕ್ಷಕಿಯಾಗಿದ್ದು, ಮಹಿಳಾ ಶಿಕ್ಷಣಕ್ಕೆ ಭದ್ರವಾದ ಅಡಿಪಾಯ ಹಾಕಿದ ಮಹಾನ್ ವ್ಯಕ್ತಿ ಎಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ದೊಡ್ಡದಾಗಿ ಇಟ್ಟುಕೊಂಡು, ಶಿಸ್ತು ಹಾಗೂ ಪರಿಶ್ರಮದೊಂದಿಗೆ ಗುರಿ ಸಾಧನೆಗೆ ಮುಂದಾಗಬೇಕು ಎಂದು ಕರೆ ನೀಡಿದರು. ಮಕ್ಕಳ ಶಿಕ್ಷಣಕ್ಕೆ ಪಾಲಕರು ಮೊದಲ ಆದ್ಯತೆ ನೀಡಬೇಕೆಂದೂ ಅವರು ತಿಳಿಸಿದರು.
ನಂತರ ಮಕ್ಕಳಿಂದ ನಾಟಕ, ನೃತ್ಯ, ಹಾಡುಗಾರಿಕೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಹಾಗೂ ಪಠ್ಯೇತರ ಕಾರ್ಯಕ್ರಮಗಳು ನಡೆಯಿತು.ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರಿಮತಿ ಎಫ್.ಬಿ. ಜಮಾದಾರ ಮತ್ತು ಅನಿತಾ ನರೇಗಲ್ ಅವರು ಶಾಲೆಯ ವಾರ್ಷಿಕ ವರದಿಯನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದ ಸ್ವಾಗತವನ್ನು ಅಹೆಮದ್ ಅತ್ತಾರ ನೆರವೇರಿಸಿದರು. ನಿರೂಪಣೆಯನ್ನು ಆಲಿಯಾ ಮತ್ತು ಉಮ್ಮೆ ಹಾನಿ ಬಿಜಾಪುರ ಅವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಕುರಾನ್ ಪಠಣವನ್ನು ಅನಸ್ ಮುಲ್ಲಾ ನೆರವೇರಿಸಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಅರ್ಶಿಯಾ ಜುನೇದಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಲೀಂ ಪುಣೆಕರ್, ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.
















