ರಾಯಚೂರು: ದೇಶದಲ್ಲಿ ಮಹಿಳೆಯರಿಗೆ ಅಕ್ಷರ ಪರಿಚಯಿಸಿದ ಮಹಾನ್ ನಾಯಕಿ ಮತ್ತು ಮೊಟ್ಟ ಮೊದಲ ಮಹಿಳಾ ಶಿಕ್ಷಕಿಯಾದ ಸಾವಿತ್ರಿಬಾಯಿ ಪುಲೆ ಅವರ ಪುತ್ಥಳಿ ಸ್ಥಾಪನೆಗೆ ನಗರಸಭೆ ಮುಂದಾಗಬೇಕೆಂದು ಮಾಜಿ ಶಾಸಕ ಎನ್.ಎಸ್.ಬೋಸರಾಜು ಹೇಳಿದರು.
ಅವರಿಂದು ಮಂತ್ರಾಲಯ ರಸ್ತೆಯಲ್ಲಿರುವ ಸಾವಿತ್ರಿಬಾಯಿ ಪುಲೆ ಅವರ ವೃತ್ತದಲ್ಲಿ ಹೂಗಾರ್ ಸಮಾಜದಿಂದ ಆಯೋಜಿಸಿದ್ದ ಸಾವಿತ್ರಿಬಾಯಿ ಪುಲೆ ಜಯಂತಿ ಆಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಸಾವಿತ್ರಿಬಾಯಿ ಪುಲೆ ಅವರು ದೇಶದ ಕಂಡ ಮೊದಲ ಶಿಕ್ಷಕಿ. ಅವರ ಸಾಮಾಜಿಕ ಸಂದೇಶ ಹೆಚ್ಚಿನ ರೀತಿಯಲ್ಲಿ ಜನರ ಮಧ್ಯೆ ತಲುಪಿಸುವ ಕೆಲಸ ನಡೆಯಬೇಕು. ಹೂಗಾರ್ ಸಮಾಜ ಸಣ್ಣ ಸಮುದಾಯವಾಗಿದ್ದರೂ, ಎಲ್ಲಾರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಮಾಜದಲ್ಲಿ ಸಾಮರಸ್ಯದಿಂದ ಚಟುವಟಿಕೆ ನಿರ್ವಹಿಸುತ್ತದೆ. ಸಾವಿತ್ರಿಬಾಯಿ ಪುಲೆ ಅವರ ಪುತ್ಥಳಿಯೊಂದನ್ನು ನಗರಸಭೆಯಿಂದ ಪ್ರತಿಷ್ಠಾಪಿಸುವಂತಹ ಕೆಲಸ ನಡೆಯಲಿ ಎಂದ ಅವರು, ಇಂತಹ ಮಹಾನ್ ವ್ಯಕ್ತಿಗಳ ಇತಿಹಾಸ ಮತ್ತು ಅವರ ಆದರ್ಶಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಲೆಂದರು. ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಶಂಕ್ರಪ್ಪ ಅವರು, ಸಾವಿತ್ರಿಬಾಯಿ ಪುಲೆ ಅವರು ಒಂದು ಸಮಾಜಕ್ಕೆ ಸೀಮಿತವಲ್ಲದ ಆದರ್ಶ ವ್ಯಕ್ತಿಗಳಾಗಿದ್ದಾರೆ. ಅವರು, ದೇಶದಲ್ಲಿ ಮಹಿಳೆಯರಿಗೆ ಅಕ್ಷರ ಕಲಿಸಿದ ಮಹಾನ್ ಶಿಕ್ಷಕಿ. ಹೂಗಾರ್ ಸಮಾಜ ಈ ಕಾರ್ಯಕ್ರಮಕ್ಕೆ ಎಲ್ಲಾ ಸಮುದಾಯಗಳನ್ನು ಆಹ್ವಾನಿಸುವ ಮೂಲಕ ಈ ಕಾರ್ಯ ನಿರ್ವಹಿಸುತ್ತಿರುವುದು ಅತ್ಯಂತ ಸಮಯೋಚಿತವಾಗಿದೆಂದು ಹೇಳಿದರು.
ವಿಶ್ವನಾಥ ಹೂಗಾರ್ ಅವರು ಈ ಸಂದರ್ಭದಲ್ಲಿ ಮಾತನಾಡುತ್ತಾ, ಸಾವಿತ್ರಿಬಾಯಿ ಪುಲೆ ಅವರ ಜೀವನ ಚರಿತ್ರೆಯನ್ನು ಹೇಳಿದರು. ಈ ಕಾರ್ಯಕ್ರಮಕ್ಕೆ ಜಯಣ್ಣ, ಕೆ.ಶಾಂತಪ್ಪ, ಮಾಡಗಿರಿ ನರಸಿಂಹಲು, ರವೀಂದ್ರ ಜಲ್ದಾರ್, ಕಡಗೋಳ ಆಂಜಿನೇಯ್ಯ, ಹೂಗಾರ್ ಸಮಾಜದ ಜಿಲ್ಲಾಧ್ಯಕ್ಷ ಈರಣ್ಣ ಹೂಗಾರ್, ವೆಂಕಟೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.