ಮುದ್ದೇಬಿಹಾಳದ ಸಾವಿತ್ರಿ ವಣಕ್ಯಾಳಗೆ ಜಿಲ್ಲಾ ಮಟ್ಟದ ‘ಸಾಧಕಿ’ ಪ್ರಶಸ್ತಿ ಗೌರವ
ಮುದ್ದೇಬಿಹಾಳ: ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮೇಲ್ವಿಚಾರಕಿಯಾಗಿ ಸೇವೆ ಸಲ್ಲಿಸುತ್ತಿರುವ ಸಾವಿತ್ರಿ ವಣಕ್ಯಾಳ ಅವರು 2026ನೇ ಸಾಲಿನ ಜಿಲ್ಲಾ ಮಟ್ಟದ ‘ಸಾಧಕಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶಿಸ್ತುಬದ್ಧ ಸೇವೆಗೆ ಸಂದ ಮನ್ನಣೆ
ಜಿಲ್ಲಾಡಳಿತವು ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹಿಳೆಯರನ್ನು ಗುರುತಿಸಿ ಈ ಪ್ರಶಸ್ತಿ ನೀಡುತ್ತದೆ. ಸಾವಿತ್ರಿ ವಣಕ್ಯಾಳ ಅವರು ಇಲಾಖೆಯಲ್ಲಿ ತೋರಿದ ಕರ್ತವ್ಯ ನಿಷ್ಠೆ, ಶಿಸ್ತುಬದ್ಧ ಕಾರ್ಯವೈಖರಿ ಹಾಗೂ ಸಮಾಜಮುಖಿ ಸೇವೆಯನ್ನು ಪರಿಗಣಿಸಿ ಮುದ್ದೇಬಿಹಾಳ ತಾಲೂಕಿನಿಂದ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪ್ರದಾನ:
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಜಯಪುರದ ಇತಿಹಾಸ ಪ್ರಸಿದ್ಧ ಕಂದಗಲ್ಲ ಹಣಮಂತ್ರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (CEO) ಸಾವಿತ್ರಿ ಅವರಿಗೆ ಪ್ರಶಸ್ತಿ ನೀಡಿ, ಅವರ ಸೇವೆಯನ್ನು ಶ್ಲಾಘಿಸಿ ಗೌರವಿಸಿದರು.
ಈ ಗೌರವಕ್ಕೆ ಪಾತ್ರರಾದ ಸಾವಿತ್ರಿ ವಣಕ್ಯಾಳ ಅವರಿಗೆ ತಾಲೂಕಿನ ಗಣ್ಯರು, ಇಲಾಖೆಯ ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.