ರೈತ ಹೋರಾಟದ ದ್ರುವತಾರೆ ಸಂಗಣ್ಣ ಬಾಗೇವಾಡಿ ಅಸ್ತಂಗತ..
ಮುದ್ದೇಬಿಹಾಳ: ತಾಲ್ಲೂಕಿನಾದ್ಯಂತ ದಶಕಗಳ ಕಾಲ ರೈತ ಚಳವಳಿಯನ್ನು ಕಟ್ಟಿ, ರೈತರ ಹಕ್ಕುಗಳಿಗಾಗಿ ನಿರಂತರ ಹೋರಾಡಿದ್ದ ಮಹಾನ್ ನಾಯಕ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ ಅವರ ನಿಧನಕ್ಕೆ ರೈತ ಸಂಘಟನೆಯ ಪದಾಧಿಕಾರಿಗಳು ಕಂಬನಿ ಮಿಡಿದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಪದಾಧಿಕಾರಿಗಳು ಮೌನಾಚರಣೆ ಮಾಡುವ ಮೂಲಕ ಅಗಲಿದ ಚೇತನಕ್ಕೆ ಗೌರವ ಸಮರ್ಪಿಸಿದರು.ನನ್ನ ಒಡಹುಟ್ಟಿದ ಸಹೋದರನನ್ನು ಸಂಗಣ್ಣ ಕಳೆದುಕೊಂಡಿದ್ದೇನೆ:
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ, “ಸಂಗಣ್ಣ ಬಾಗೇವಾಡಿ ಅವರು ಕೇವಲ ಸಂಘಟನೆಯ ನಾಯಕರಾಗಿರಲಿಲ್ಲ, ನನ್ನ ಸ್ವಂತ ಸಹೋದರನಂತಿದ್ದರು. ನಿನ್ನೆ ತಾನೇ ನನ್ನ ಜೊತೆ ಪತ್ರಿಕಾಗೋಷ್ಠಿಯಲ್ಲಿ ಕುಳಿತು ಮಾತನಾಡಿದ್ದರು, ಇಂದು ಅವರು ನಮ್ಮೊಂದಿಗಿಲ್ಲ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇಡೀ ರಾಜ್ಯದ ರೈತ ಸಮುದಾಯದ ಜೊತೆಗೂಡಿ ಅವರು ಮಾಡಿದ ಹೋರಾಟ ಅಮೋಘವಾದದ್ದು. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ,” ಎಂದು ಅತ್ಯಂತ ದುಃಖತಪ್ತರಾಗಿ ನುಡಿದರು.
ತಾಲೂಕಿನ ರೈತ ಶಕ್ತಿ ಕುಂದಿದೆ.
ರಾಜ್ಯ ಸಂಘಟನಾ ಕಾರ್ಯದರ್ಶಿ ಬಸನಗೌಡ ಬಿ. ಪಾಟೀಲ (ಮುರಾಳ) ಮಾತನಾಡಿ, “ಮುದ್ದೇಬಿಹಾಳ ತಾಲ್ಲೂಕಿನಲ್ಲಿ ರೈತ ಸಂಘಟನೆಯನ್ನು ಶಕ್ತಿಯುತವಾಗಿ ಕಟ್ಟಿದ ಕೀರ್ತಿ ಸಂಗಣ್ಣ ಅವರಿಗೆ ಸಲ್ಲುತ್ತದೆ. ಕಬ್ಬು ಕಾರ್ಖಾನೆ ಎದುರಿನ ಬೃಹತ್ ಪ್ರತಿಭಟನೆಗಳಾಗಿರಲಿ ಅಥವಾ ನೀರಾವರಿ ಹೋರಾಟಗಳಾಗಿರಲಿ, ಅವರು ಮುಂಚೂಣಿಯಲ್ಲಿದ್ದರು. ಅವರ ನಿಧನದಿಂದ ಈ ಭಾಗದ ರೈತರು ಒಬ್ಬ ಅಪ್ಪಟ ಹಿತೈಷಿಯನ್ನು ಕಳೆದುಕೊಂಡಿದ್ದಾರೆ,” ಎಂದರು.
ಹೋರಾಟದ ಹಾದಿ ಸ್ಮರಣೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಲಿಂಗಪ್ಪಗೌಡ ಹಂಡರಗಲ್ಲ ಮತ್ತು ರೈತ ಮುಖಂಡ ಲಕ್ಷ್ಮಣ ಬಿಜ್ಜೂರ ಮಾತನಾಡಿ, ಬಿತ್ತನೆ ಬೀಜ, ರಸಗೊಬ್ಬರ ಮತ್ತು ರೈತರ ಅನೇಕ ಸಮಸ್ಯೆಗಳ ವಿರುದ್ಧ ಸಂಗಣ್ಣ ಅವರು ನಡೆಸಿದ ಹೋರಾಟಗಳು ನಮಗೆ ಮಾದರಿ. ಅಂತಹ ಮಹಾನ್ ನಾಯಕರಿಗೆ ಈ ರೀತಿಯ ಸಾವು ಬರಬಾರದಿತ್ತು ಎಂದು ವಿಷಾದಿಸಿದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷರಾದ ಸಿದ್ದನಗೌಡ ಬಿರಾದಾರ ಅವರು ಮಾತನಾಡಿ, ಭಗವಂತನು ಸಂಗಣ್ಣ ಅವರ ಕುಟುಂಬಕ್ಕೆ ಈ ಅಗಾಧವಾದ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.
ಸಭೆಯಲ್ಲಿ ರೈತ ಸಂಘದ ಪದಾಧಿಕಾರಿಗಳು, ಪಟ್ಟಣದ ಗಣ್ಯರು ಹಾಗೂ ನೂರಾರು ರೈತರು ಪಾಲ್ಗೊಂಡು ತಮ್ಮ ನೆಚ್ಚಿನ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗುರುಸಂಗಪ್ಪ ಗೌಡ ಬಿದರಕುಂದಿ,ವಾಯ್ ಎಲ್ ಬಿರಾದಾರ,ಅಯ್ಯಪ್ಪ ತಂಗಡಗಿ,ಹುಲ್ಲಗಪ್ಪಗೌಡ ಬಿರಾದಾರ ,ಸಂಗಣ್ಣ ಬಿಸಲದಿನ್ನಿ ರೈತ ಸಂಘದ ಪದಾಧಿಕಾರಿಗಳು ಸೇರಿದಂತೆ ಉಪಸ್ಥಿತರಿದ್ದರು.