ಹುಲ್ಲೂರ ತಾಂಡಾ ನಂ 2ರಲ್ಲಿ ಗಮನ ಸೆಳೆದ ಗ್ರಾಮೀಣ ಸಸಿ ಹಬ್ಬ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ : ತಾಲೂಕಿನ ಹುಲ್ಲೂರ ತಾಂಡಾ ನಂ -2 ದಲ್ಲಿ ಕನ್ಯೆಯರು ವಿಶೇಷ ಶೈಲಿಯ ವಿನ್ಯಾಸದಿಂದ ಕೂಡಿದ ಉಡುಗೆ, ತೊಡುಗೆಗಳಿಂದ ಬಂಜಾರಾ ಸಂಸ್ಕೃತಿಯ ನೃತ್ಯ ಮಾಡುವ ಮೂಲಕ ಸಮುದಾಯದವರು ಸೌಹಾರ್ದ ಮೂಡಿಸುವ ಸಸಿ ಹಬ್ಬವನ್ನು ಆಚರಿಸಿದರು.
ಮಣ್ಣಿನಿಂದ ಗಂಡು, ಹೆಣ್ಣು ಮೂರ್ತಿಗಳನ್ನು ನಿರ್ಮಿಸಿ ಅವುಗಳನ್ನು ಪೂಜಿಸಿ ಕಾಮ, ಕ್ರೋಧ ದೂರವಾಗಲಿ ಎಂದು ನಾರಿಯರು ಪ್ರಾರ್ಥಿಸಿದರು. ಇದಕ್ಕೆ ‘ಗನಗೋರಾ’ ಎನ್ನುತ್ತಾರೆ.
ಬಳಿಕ ಹಲಗೆನಾದ, ಹಾಡುಗಳೊಂದಿಗೆ ಹೆಜ್ಜೆ ಹಾಕುತ್ತ ಸಸಿಯೊಂದಿಗೆ ತಾಂಡಾಗಳ ಎಲ್ಲ ದೇವಸ್ಥಾನಗಳಿಗೆ ತೆರಳಿ ಅವುಗಳನ್ನು ದೇವರಿಗೆ ಸ್ಪರ್ಶಿಸಲಾಗುತ್ತದೆ. ತಾಂಡಾದ ಹಿರಿಯರೆಲ್ಲರೂ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಎಲ್ಲರೂ ಪರಸ್ಪರ ಸಸಿಗಳನ್ನು ವಿನಿಮಯ ಮಾಡಿಕೊಂಡು ಬದುಕು ಬಂಗಾರವಾಗಲಿ ಎಂದು ಶುಭ ಕೋರುತ್ತಾರೆ. ಕನ್ಯೆಯರು ಸಸಿಗಳನ್ನು ಪಟ್ಟಗದಲ್ಲಿ ತುರಾಯಿಯಂತೆ ಇಟ್ಟುಕೊಂಡಾಗ ಆಚರಣೆಗೆ ತೆರೆ ಬೀಳುತ್ತದೆ.
ಬಂಜಾರಾ ಕನ್ಯೆಯರು, ಮಹಿಳೆಯರು ಹಲಗೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುವುದನ್ನು ಸರ್ವರೂ ಕೆಲ ಕಾಲ ನಿಂತು ನೋಡಿದರು. ಹೊಸ ಬಟ್ಟೆ ತೊಟ್ಟು ತಲೆ ಮೇಲೆ ಸಸಿ ಬುಟ್ಟಿ ಹೊತ್ತು ತಾಳಕ್ಕೆ ತಕ್ಕ ಹೆಜ್ಜೆ ಹಾಕಿದರು. ಕೆಲವರು ನಾರಿಯರ ಲೇಜಿಮ್ ನೃತ್ಯ ಗಮನ ಸೆಳೆಯುತ್ತು.
ಸರ್ವರ ಬದುಕು ಬಂಗಾರವಾಗಲಿ ಎಂದು ಪ್ರಕೃತಿ ಮಾತೆಯನ್ನು ಪ್ರಾರ್ಥಿಸುವುದೇ ಈ ಸಸಿ ಹಬ್ಬದ ಮುಖ್ಯ ಉದ್ದೇಶ. ಉತ್ತಮ ಮಳೆಯಾಗಿ ಸರಿಯಾದ ಬೆಳೆ ಸಿಗಲಿ. ಗ್ರಾಮೀಣ ಜನರ ಬದುಕು ಸಮೃದ್ಧವಾಗಲಿ ಎಂದು ಪ್ರಾರ್ಥಿಸಲು ತಾಂಡಾದ ಎಲ್ಲಜನ ಈ ಹಬ್ಬದಲ್ಲಿ ಭಾಗವಹಿಸಿದ್ದರು.
ಸಸಿ ಹಬ್ಬದ ನೆಪದಲ್ಲಿ ತಾಂಡಾದ ಎಲ್ಲಜನ ಒಂದೆಡೆ ಸೇರುತ್ತೇವೆ. ಇದರಿಂದ ನಮ್ಮ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಇದು ಬಾಂಧವ್ಯ ಬೆಸೆಯುವ ಹಬ್ಬವಾಗಿದೆ ಎಂದು ಹುಲ್ಲೂರ ಗ್ರಾಪಂ ಸದಸ್ಯ ಶಿವಾನಂದ ಲಮಾಣಿ ಅವರ ತಿಳಿಸಿದ್ದಾರೆ.