ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ-1943 ರ ಮೂಲಕ ಸರ್ಕಾರದ ಗಮನಸೆಳೆದ ಶಾಸಕ ಯತ್ನಾಳ
ಕಿತ್ತೂರು ರಾಣಿ ಚನ್ನಮ್ಮ ನಾಟ್ಯ ಮಂದಿರ ನಿರ್ಮಾಣಕ್ಕೆ ರೂ.50 ಲಕ್ಷ ಮಂಜೂರು
ವಿಜಯಪುರ: ನಗರದ ಕೇಂದ್ರ ಬಸ್ ನಿಲ್ದಾಣದ ಪಕ್ಕದಲ್ಲಿದ್ದ ಶತಮಾನದ ಅಂಚಿನ ಕಿತ್ತೂರು ರಾಣಿ ಚೆನ್ನಮ್ಮ ನಾಟ್ಯ ಮಂದಿರ ನಿರ್ಮಾಣಕ್ಕೆ ರೂ.50 ಲಕ್ಷ ಅನುದಾನವನ್ನು ಮಂಜೂರಿಸಿ, ಬಿಡುಗಡೆಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು, ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1943ರ ಮೂಲಕ ಶತಮಾನದ ಅಂಚಿನ ಕಿತ್ತೂರು ರಾಣಿ ಚೆನ್ನಮ್ಮ ನಾಟ್ಯ ಮಂದಿರ ಪುನರ್ ನಿರ್ಮಾಣಕ್ಕೆ ಒತ್ತಾಯಿಸಿದ್ದರು.
ನಾಡಿನ ಅನೇಕ ಚಲನಚಿತ್ರ ನಟ, ನಟಿಯರು, ಹವ್ಯಾಸಿ ಕಲಾವಿದರಿಗೆ ಅತ್ಯುತ್ತಮ ವೇದಿಕೆ ಆಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ನಾಟ್ಯ ಮಂದಿರ ನೆಲಸಮಗೊಂಡು, 8 ವರ್ಷಗಳು ಗತಿಸಿದರೂ ಈವರೆಗೆ ಪುನರ್ ನಿರ್ಮಾಣ ಆಗಿರುವುದಿಲ್ಲ. ಅನುದಾನ ಮಂಜೂರಾತಿಗಾಗಿ ಸರ್ಕಾರಕ್ಕೆ ಅನೇಕ ಬಾರಿ ಪ್ರಸ್ತಾವನೆ ಸಲ್ಲಿಸಿದರೂ ಬಿಡುಗಡೆಗೊಳ್ಳದೆ, ಈ ನಾಟ್ಯ ಮಂದಿರ ಪುನರುಜ್ಜೀವನ ಕಾರ್ಯ ನೆನಗೂದಿಗೆ ಬಿದ್ದಿದ್ದರಿಂದ ನಾಟಕಗಳ ಪ್ರದರ್ಶನಕ್ಕೆ ಸಮಸ್ಯೆ ಆಗುತ್ತಿರುವ ಬಗ್ಗೆ ಹಿಂದಿನ ಬಜೆಟ್ ಅಧಿವೇಶನದಲ್ಲಿಯೂ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2768ರ ಮೂಲಕವೂ ಸರ್ಕಾರದ ಗಮನಸೆಳೆದಿದ್ದರು. ಆಗ ಪರಿಶೀಲಿಸಲಾಗುವಾಗಿ ಸರ್ಕಾರ ಭರವಸೆ ನೀಡಿತ್ತು. ಅಲ್ಲದೇ, ಮುಖ್ಯಮಂತ್ರಿಗಳು, ಸಚಿವರಿಗೂ ಪತ್ರ ಬರೆದರೂ ಅನುದಾನ ಬಿಡುಗಡೆಗೊಂಡಿರಲಿಲ್ಲ.
ಹೀಗಾಗಿ ಪ್ರಸಕ್ತ ಚಳಿಗಾಲ ಅಧಿವೇಶನದಲ್ಲಿ ಮತ್ತೆ ನಾಟಕ ಪ್ರೋತ್ಸಾಹಿಸಲು ಹಾಗೂ ಹಲವು ದಶಕಗಳ ಕಾಲ ಸಾವಿರಾರು ಕಲಾವಿದರ ಕಲೆ ಪ್ರದರ್ಶನಕ್ಕೆ ವೇದಿಕೆ ಆಗಿದ್ದ ಈ ನಾಟ್ಯ ಮಂದಿರ ಪುನರುಜ್ಜೀವನಗೊಳಿಸಲು ಅಗತ್ಯ ಅನುದಾನ ಮಂಜೂರಿಸಿ, ಅನುಷ್ಠಾನಗೊಳಿಸುವ ಬಗ್ಗೆ ಸರ್ಕಾರದ ಗಮನಸೆಳೆದಿದ್ದರಿಂದ, 10-12-2025 ರಂದು ಸರ್ಕಾರ ರೂ.50 ಲಕ್ಷ ಮಂಜೂರಿಸಿ, ಬಿಡುಗಡೆಗೊಳಿಸಿರುವುದಾಗಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆಂದು ನಗರ ಶಾಸಕರ ಸಾರ್ವಜನಿಕ ಸಂಪರ್ಕ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.



















