‘ಓದುವ ಹವ್ಯಾಸ-ಜ್ಞಾನದ ವಿಕಾಸ’
ಓದುವ ಹವ್ಯಾಸ ಭವಿಷ್ಯ ನಿರ್ಮಾಣಕ್ಕೆ ದಾರಿದೀಪ-
ಸಂತೋಷ ಬಂಡೆ
ಇಂಡಿ: ಓದುವ ಹವ್ಯಾಸವು ಮಕ್ಕಳಲ್ಲಿ ಶಬ್ದ ಭಂಡಾರ, ಗ್ರಹಿಕಾ ಸಾಮರ್ಥ್ಯ, ಏಕಾಗ್ರತೆಯ ಶಕ್ತಿ, ಭಾಷಾ ಕೌಶಲ,
ವಿಮರ್ಶಾತ್ಮಕ ಚಿಂತನೆ, ತಾರ್ಕಿಕತೆ, ವಿಶ್ಲೇಷಣಾ ಸಾಮರ್ಥ್ಯ ಕಲ್ಪನಾ ಶಕ್ತಿ, ಸೃಜನಶೀಲತೆಯನ್ನು ಬೆಳೆಸುವಲ್ಲಿ ಅತ್ಯಂತ ಪ್ರಮುಖ ಸಾಧನವಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ‘ಓದುವ ಹವ್ಯಾಸ-ಜ್ಞಾನದ ವಿಕಾಸ’ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು.
ಓದುವುದು ಜ್ಞಾನದ ಪ್ರಮುಖ ಬಾಗಿಲಾಗಿದೆ. ಈ
ಹವ್ಯಾಸದಿಂದ ಮನಸ್ಸು ಉಲ್ಲಾಸಗೊಳ್ಳುವ ಜತೆಗೆ ನಮ್ಮಲ್ಲಿ ಜ್ಞಾನ ಹಾಗೂ ಕೌಶಲವನ್ನು ಹೆಚ್ಚಿಸುವುದರೊಂದಿಗೆ ನಮ್ಮ ಭವಿಷ್ಯ ನಿರ್ಮಾಣಕ್ಕೂ ದಾರಿದೀಪವಾಗುತ್ತದೆ. ಕಲಿಕೆ ಮತ್ತು ಓದು ಬದುಕಿನ ಅವಿಭಾಜ್ಯ ಅಂಗ ಎಂಬ ರೀತಿಯಲ್ಲಿ ಓದುವ ಅಭ್ಯಾಸವನ್ನು ಮಕ್ಕಳಲ್ಲಿ ರೂಢಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಶಿಕ್ಷಕಿ ಎಸ್ ಪಿ ಪೂಜಾರಿ ಮಾತನಾಡಿ, ವಿದ್ಯಾಭ್ಯಾಸವು ಜೀವನದ ಅತ್ಯಗತ್ಯವಾದ ಸಂಗತಿ. ಇದು ಬದುಕಿನಲ್ಲಿ ಉತ್ತಮ ಬೆಳವಣಿಗೆ ಹಾಗೂ ಭವಿಷ್ಯವನ್ನು ಸೃಷ್ಟಿಸುವುದು.
ಅದರಲ್ಲೂ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಹೆಚ್ಚು ಬೆಳೆಸುವುದು ಅವಶ್ಯಕವಾಗಿದ್ದು, ಕಲಿಕೆಯೊಂದಿಗೆ ಓದು ಕೂಡ ಜೊತೆಯಲ್ಲಿ ಸಾಗಬೇಕು ಎಂದು ಹೇಳಿದರು.
ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ಪುಸ್ತಕ ಅತ್ಯುತ್ತಮ ಗೆಳೆಯನಿದ್ದಂತೆ. ಪುಸ್ತಕ ಓದುವುದರಿಂದ ವಿಶ್ವ ಸುತ್ತಿದ ಅನುಭವವಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಶ್ರೇಷ್ಠ ಪುಸ್ತಕಗಳನ್ನು ಓದುವದರಿಂದ ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣಗೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳು ಗ್ರಂಥಾಲಯದ ಪುಸ್ತಕಗಳನ್ನು ಓದಿದರು.