ಸಮಾಜದ ಸುವ್ಯವಸ್ಥೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ವ್ಯಕ್ತಿಗಳಲ್ಲಿ ರಫೀ ಭಂಡಾರಿ
ವಿಜಯಪುರ: ಗ್ರಾಮೀಣ ಪ್ರದೇಶಗಳ ಅನೇಕ ಮೂಲಭೂತ ಸಮಸ್ಯೆಗಳನ್ನು ಗುರುತಿಸಿ, ಸಮಾಜದ ಸುವ್ಯವಸ್ಥೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ವ್ಯಕ್ತಿಗಳಲ್ಲಿ ರಫೀ ಭಂಡಾರಿ ಕೂಡ ಒಬ್ಬರಾಗಿದ್ದಾರೆ ಎಂದು ಬೆಂಗಳೂರಿನ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು.
ಇಲ್ಲಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ಪತ್ರಕರ್ತ ರಫೀ ಭಂಡಾರಿ ಅಭಿನಂದಾನ ಸಮಿತಿ ವಿಯಯಪುರ ಇವರ ಸಹಯೋಗದಲ್ಲಿ ರವಿವಾರ ಆಯೋಜಿಸಿದ್ದ “ರಫೀ ಭಂಡಾರಿ ಅವರ ವ್ಯಕ್ತಿತ್ವ ಮತ್ತು ಪತ್ರಿಕಾ ಸಾಧನೆ” ಅಭಿನಂದನಾ ಕೃತಿ ಬಿಡುಗಡೆ-ಸನ್ಮಾನ ಮತ್ತು ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ದತ್ತಿನಿ಼ಧಿ ಉಪನ್ಯಾಸ ಸ್ಥಾಪನೆ ಘೋಷಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತವು ಅಪಾರ ಭಾಷಾ ವೈವಿಧ್ಯತೆಯನ್ನು ಹೊಂದಿರುವ ದೇಶವಾಗಿದ್ದು, ವಿವಿಧ ಭಾಷೆಗಳ ಮೂಲಕ ಅನೇಕ ಸಮುದಾಯಗಳು ಹಾಗೂ ಸಮಾಜಗಳ ಬೆಳವಣಿಗೆಯಲ್ಲಿ ಪತ್ರಿಕೋದ್ಯಮ ಮಹತ್ವದ ಪಾತ್ರ ವಹಿಸಿದೆ. ಆದರೆ, ಗ್ರಾಮೀಣ ಸಮಸ್ಯೆಗಳು ಇನ್ನೂ ಸಮರ್ಪಕವಾಗಿ ಮುಖ್ಯವಾಹಿನಿಗೆ ಬರದೇ ಉಳಿದಿವೆ ಎಂಬುದು ಆತಂಕಕಾರಿ ಸಂಗತಿಯಾಗಿದೆ ಎಂದರು. ಈ ಹಿನ್ನೆಲೆಗಳಲ್ಲಿ ಭಾಷಾ ಪತ್ರಿಕೋದ್ಯಮವು ಕೇವಲ ಸುದ್ದಿಯನ್ನು ನೀಡುವ ಮಾಧ್ಯಮವಾಗಿರದೆ, ಸಂಸ್ಕೃತಿ, ಭಾಷೆ ಮತ್ತು ಆಚಾರ-ವಿಚಾರಗಳನ್ನು ಪ್ರತಿನಿಧಿಸುವ ಪ್ರಮುಖ ವೇದಿಕೆಯಾಗಬೇಕು. ಪತ್ರಿಕೋದ್ಯಮವನ್ನು ಒಂದು ಉದ್ಯಮವಾಗಿ ಮಾತ್ರ ನೋಡದೆ, ಸಮಾಜದ ಒಳಿತಿಗಾಗಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ನೈತಿಕ ಕರ್ತವ್ಯವನ್ನು ಮಾಧ್ಯಮಗಳು ನಿರ್ವಹಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಇಂದಿನ ಮಾಧ್ಯಮ ಕ್ಷೇತ್ರದಲ್ಲಿ ಹಲವಾರು ಪತ್ರಿಕೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಂದು ಪತ್ರಿಕೆಯೂ ಸಮಾಜದ ಸುವ್ಯವಸ್ಥೆ ಮತ್ತು ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡೇ ಕೆಲಸ ಮಾಡುತ್ತಿದೆ. ಈ ಸಾಧನೆಗಳ ಹಿಂದೆ ಅನೇಕ ವ್ಯಕ್ತಿಗಳ ಅಪ್ರತಿಮ ಪರಿಶ್ರಮ ಅಡಗಿದೆ. ಅಂತಹ ರೂವಾರಿಗಳಲ್ಲಿ ಒಬ್ಬರಾದ ರಫೀ ಭಂಡಾರಿ ಅವರು ಅನೇಕ ಮಹತ್ವದ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇಂತಹ ಮಾದರಿ ನಾಯಕರು ಪತ್ರಿಕೋದ್ಯಮ ಕ್ಷೇತ್ರಕ್ಕೆ ದಾರಿದೀಪವಾಗಿದ್ದು, ಇತರರಿಗೆ ಪ್ರೇರಣೆಯಾಗಿ ನಿಲ್ಲುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ ಮಾತನಾಡಿ, ಇಡೀ ವ್ಯವಸ್ಥೆ ಸರಿಯಾದ ದಾರಿಯಲ್ಲಿ ಸಾಗಬೇಕಾದರೆ, ಯೋಗ್ಯ ವ್ಯಕ್ತಿಗಳನ್ನು ಗುರುತಿಸಿ ಉತ್ತೇಜಿಸುವುದು ಅತ್ಯಗತ್ಯವಾಗಿದೆ. ಈ ಅರ್ಥದಲ್ಲಿ ರಫೀ ಭಂಡಾರಿ ಅವರಂತಹ ಪತ್ರಕರ್ತರು ಸಂಪೂರ್ಣ ಪತ್ರಿಕೋದ್ಯಮ ಸಮುದಾಯಕ್ಕೆ ದಾರಿದೀಪರಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಮಾತನಾಡಿ, ರಫೀ ಭಂಡಾರಿ ಅವರು ಕೈಗೊಂಡಿರುವ ಕೆಲಸ ಕಾರ್ಯಗಳು ಸಮಾಜ, ವಿಶ್ವವಿದ್ಯಾನಿಲಯ ಹಾಗೂ ಜಿಲ್ಲೆಯಂತಹ ಅನೇಕ ಕ್ಷೇತ್ರಗಳ ಸಮಗ್ರ ಬೆಳವಣಿಗೆಗೆ ಸಹಕಾರಿಯಾಗಿದ್ದು, ಸಮಾಜವನ್ನು ಮುನ್ನಡೆಸುವ ಗುಣ ಅವರಲ್ಲಿ ಅಡಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎ.ಎಂ.ಖಾನ್ ಮಾತನಾಡಿ, ಮಾಧ್ಯಮ ರಂಗಕ್ಕೆ ನೀಡಿದ ಸೇವೆ ಹಾಗೂ ಉರ್ದು ಭಾಷೆಗಳ ಬೆಳವಣಿಗೆಗೆ ಸಲ್ಲಿಸಿದ ಕೊಡುಗೆ ಮತ್ತು ಜನಸಾಮಾನ್ಯರಿಗೆ ಮಾಡಿದ ಸೇವೆಗಳು ಅಪಾರ ಶ್ರೇಷ್ಠತೆಯನ್ನು ಪಡೆದಿವೆ. ಇಂತಹ ವ್ಯಕ್ತಿಗಳ ಸಂಖ್ಯೆ ಪತ್ರಿಕಾರಂಗದಲ್ಲಿ ಇನ್ನಷ್ಟು ಹೆಚ್ಚಾಗಬೇಕು. ಪತ್ರಿಕೋದ್ಯಮದಲ್ಲಿ ಇವರ ಸೇವೆ ಇತರರಿಗೆ ಮಾರ್ಗದರ್ಶನವಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಮಾತನಾಡಿ, ಉತ್ತರ ಕರ್ನಾಟಕದ ಬರಡು ಭೂಮಿ ವಿಜಯಪುರದಲ್ಲಿ ಮಹಿಳಾ ವಿಶ್ವವಿದ್ಯಾನಿಲಯ ಸ್ಥಾಪನೆಯಗಲು ಹಾಗೂ ಈ ಭಾಗದ ಎಲ್ಲಾ ಹೆಣ್ಣುಮಕ್ಕಳು ಉನ್ನತ ಶಿಕ್ಷಣಕ್ಕೆ ಹಾಗೂ ಮಹಿಳಾ ವಿವಿಯ ಅಭಿವೃದ್ಧಿಗೆ ಕಾರಣಿಕರ್ತರಾಗಿರುವ ಬಹುಮುಖ ವ್ಯಕ್ತಿತ್ವದ ಗುಣವನ್ನು ಹೊಂದಿರುವ ರಫೀ ಭಂಡಾರಿ ಅವರು ನಮ್ಮ ಸಮಾಜದ ಒಬ್ಬ ಮಾದರಿ ವ್ಯಕ್ತಿಯಾಗಿದ್ದಾರೆ. ಸಾಮಾಜಿಕ, ಶಿಕ್ಷೆಣಿಕ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಹಲವಾರು ಕಾರ್ಯಗಳನ್ನ ಮಾಡುವ ಮೂಲಕ ಸಮಾಜದ ಸಾಕಷ್ಟು ಸಮಸ್ಯೆಗಳಿಗೆ ಪತ್ರಿಕೋದ್ಯಮ ಮೂಲಕ ಪರಿಹಾರಗಳನ್ನ ಒದಗಿಸುವ ಕಾರ್ಯವನ್ನು ಮಾಡಿದ್ದಾರೆ.. ಮಹಿಳಾ ಸಬಲೀಕರಣ, ಮಾನವ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಅಂತಹ ವ್ಯಕ್ತಿತ್ವ ಹೊಂದಿರುವ ಜೊತೆಗೆ ನಾವಿರುವುದು ನಮ್ಮ ಭಾಗ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತ ರಫೀ ಭಂಡಾರಿ ಮಾತನಾಡಿ, ಅಚ್ಚು ಮೊಳೆಗಳಿಂದ ಆರಂಭಿಸಿದ ನನ್ನ ಪಯಣ ಇಂದು ನನನ್ನು ಇಲ್ಲಿ ತನಕ ತಂದು ನಿಲ್ಲಿಸಿದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಹಾಗೂ ಸನ್ಮಾನವು ನನಗೆ ಇನ್ನಷ್ಟು ಉತ್ಸಾಹ ಮತ್ತು ಪ್ರೇರಣೆಯನ್ನು ನೀಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಿ, ಸಮಾಜಕ್ಕೆ ಹೆಚ್ಚಿನ ಕೊಡುಗೆ ನೀಡುವೆನು ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹಸೀನ್ ಮಾತನಾಡಿ, ರಫೀ ಭಂಡಾರಿ ಅವರು ವಿವಿಧ ಕ್ಷೇತ್ರಗಳಲ್ಲಿನ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗುರುತಿಸಿ, ಅವುಗಳ ಪರಿಹಾರಕ್ಕಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಾರೆ. ಅವರ ಅಪ್ರತಿಮ ಶ್ರಮ ಹಾಗೂ ಸಹಯೋಗ ಅತ್ಯಂತ ಮಹತ್ವದ್ದಾಗಿದೆ. ಅವರ ಬರವಣಿಗೆ ಇಡೀ ಜಿಲ್ಲೆಗೆ ಪ್ರಸ್ತುತವಾಗಿದ್ದು, ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗುತ್ತಿದೆ. ಮುಂಬರುವ ಯುವಕರು ಹಾಗೂ ಎಲ್ಲಾ ಪತ್ರಕರ್ತರು ಜಾತ್ಯಾತೀತತೆಯನ್ನು ಅಳವಡಿಸಿಕೊಂಡು, ಭಾರತ ದೇಶದ ಸಮಗ್ರ ಅಭಿವೃದ್ಧಿಗಾಗಿ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವೇದಿಕೆ ಮೇಲಿನ ಗಣ್ಯರು ಪುಸ್ತಕ ಬಿಡುಗಡೆಗೊಳಿಸಿದರು. ವಸೀಮ ಭಂಡಾರಿ ಹಾಗೂ ನಾಲ್ಕು ಸಹೋದರರಿಂದ ಪತ್ರಕರ್ತ ರಫೀ ಭಂಡಾರಿ ದತ್ತಿನಿಧಿ ಉಪನ್ಯಾಸ ಸ್ಥಾಪನೆ ಘೋಷಣೆ ಮಾಡಿ ಮತ್ತು ಚಕ್ ಹಸ್ತಾಂತರಿಸಿದರು. ವೇದಿಕೆ ಮೇಲಿನ ಗಣ್ಯರಿಂದ ಮೌಲಾನಾ ಅಜಾದ್ ರಾಷ್ಟಿçÃಯ ಉರ್ದು ವಿಶ್ವವಿದ್ಯಾಲಯ ಹೈದರಾಬಾದ್ ಇವರಿಂದ ಸ್ಮರಣಿಕೆ ಸಮರ್ಪಣೆ.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಡೈಲಿ ಸಾಲಾರ್ ದಿನಪತ್ರಿಕೆಯ ಸಂಪಾದಕ ಅಸ್ಜದ್ ನವಾಜ್, ಬೆಂಗಳೂರಿನ ರಾಷ್ಟಿçÃಯ ಸಹಾರಾ ದಿನಪತ್ರಿಕೆಯ ಸಂಪಾದಕ ಎನ್.ಹಮೀದಿ, ಬಿಎಲ್‌ಡಿಇ ಸಂಸ್ಥೆಯ ಸಾರ್ವಜನಿಕ ಸಂಪಕಾಧಿಕಾರಿ ಡಾ.ಮಹಾಂತೇಶ ಬಿರಾದಾರ, ವಿಜಯಪುರದ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್, ಹಿರಿಯ ಪತ್ರಕರ್ತ ಗೋಪಾಲ ನಾಯಕ್, ಆಲ್ ಅಮೀನ್ ಚಾರಿಟೇಬಲ್ ಫಂಡ್ ಟ್ರಸ್ಟ್ನ ಟ್ರಸ್ಟಿ ರಿಯಾಜ್ ಫಾರೂಕಿ, ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಸಲಾವುದ್ದೀನ್ ಪುಣೇಕರ್ ಹಾಗೂ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎ.ಎಸ್.ಪಾಟೀಲ್, ನಜೀಬ್ ಭಕ್ಷಿ, ವಸೀಮ್ ಭಂಡಾರಿ ಮತ್ತು ಕಲೀಮ ನಾಯಕ, ಜಿಲ್ಲೆಯ ಎಲ್ಲ ಪತ್ರಕರ್ತರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಾಫೀಸ್ ವಕೀಲ್ ಅಹ್ಮದ್ ಸಾಬ್ ಕುರಾನ್ ಪಠಣ ಮಾಡಿದರು. ಹಿರಿಯ ಪತ್ರಕರ್ತ ಬಾಬುರಾವ ಕುಲಕರ್ಣಿ ಪ್ರಾರ್ಥನಾ ಗೀತೆ ಹಾಡಿದರು. ಅಭಿನಂದನಾ ಸಮಿತಿಯ ಅಧ್ಯಕ್ಷ ಎಸ್.ಎಂ.ಪಾಟೀಲ್ ಗಣಿಹಾರ ಸ್ವಾಗತಿಸಿದರು. ಮಹಿಳಾ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಪ್ರಾಸ್ತವಿಕವಾಗಿ ಮಾತನಾಡಿದರು. ಮೌಲಾನಾ ಆಜಾದ್ ಉರ್ದು ವಿಶ್ವವಿದ್ಯಾಲಯದ ಪ್ರೊ.ಮುಸ್ತಾಕ್ ಪಟೇಲ್ ಅಭಿನಂದನಾ ನುಡಿಗಳನ್ನಾಡಿದರು. ಉಪಾಧ್ಯಕ್ಷ ಅಶೋಕ ಯೆಡಹಳ್ಳಿ ವಂದಿಸಿದರು. ಹುಬ್ಬಳಿಯ ಡೆಕ್ಕನ್ ಹೆರಾಲ್ಡ್ ಹಿರಿಯ ಉಪಸಂಪಾದಕಿ ಶಾಹಿನ್ ಮೊಕಾಶಿ ನಿರೂಪಿಸಿದರು.
ವಿಜಯಪುರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ಪತ್ರಕರ್ತ ರಫೀ ಭಂಡಾರಿ ಅಭಿನಂದಾನ ಸಮಿತಿ ವಿಯಯಪುರ ಇವರ ಸಹಯೋಗದಲ್ಲಿ ರವಿವಾರ ಆಯೋಜಿಸಿದ್ದ “ರಫೀ ಭಂಡಾರಿ ಅವರ ವ್ಯಕ್ತಿತ್ವ ಮತ್ತು ಪತ್ರಿಕಾ ಸಾಧನೆ” ಅಭಿನಂದನಾ ಕೃತಿ ಬಿಡುಗಡೆ-ಸನ್ಮಾನ ಮತ್ತು ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ದತ್ತಿನಿ಼ಧಿ ಉಪನ್ಯಾಸ ಸ್ಥಾಪನೆ ಘೋಷಣೆ ಕಾರ್ಯಕ್ರಮವನ್ನು ಬೆಂಗಳೂರಿನ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹಾಗೂ ಮತ್ತಿತರು ಉದ್ಘಾಟಿಸಿದರು.


















