ಹಿರಿಯ ಪತ್ರಕರ್ತ ಬಂಧನ ಖಂಡನೆ…!
ಪತ್ರಕರ್ತ ಮೈಬೂಬ್ ಮುನ್ನವಳ್ಳಿ ಬಂಧನಕ್ಕೆ ಖಂಡಿಸಿ ಮನವಿ..
ಇಂಡಿ : ಧಾರವಾಡದ ಹಿರಿಯ ಪತ್ರಕರ್ತ ಮೈಬೂಬ್ ಮುನ್ನವಳ್ಳಿ ಬಂಧನಕ್ಕೆ ಖಂಡಿಸಿ ತಾಲೂಕು ಉಪವಿಭಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.
ಧಾರವಾಡ ಜಿಲ್ಲೆಯ ಹಿರಿಯ ಪತ್ರಕರ್ತರಾಗಿರುವ ಹುಬ್ಬಳ್ಳಿಯ ಬಿಟಿವಿ ವರದಿಗಾರ ಮೈಬೂಬ್ ಮುನವಳ್ಳಿ ಅವರನ್ನು ದುರುದ್ವೇಷಪೂರ್ವಕ್ಕಾಗಿ ದಾವಣಗೆರೆ ಜಿಲ್ಲೆ ನ್ಯಾಮತಿ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ ಹಕ್ಕುಗಳ ಹೋರಾಟಗಾರ ಬಸವರಾಜ ಕೊರವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ನೋಟಿಸ್ ನೀಡದೆ ರಾತ್ರಿ ವೇಳೆ ಮನೆಗೆ ತೆರಳಿ ವಿಚಾರಣೆ ನೆಪದಲ್ಲಿ ಕರೆದುಕೊಂಡು ಹೋಗಿದ್ದಲ್ಲದೇ ಒಂದು ದಿನ ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದಾರೆ. ಒಬ್ಬ ಪತ್ರಕರ್ತ ಸುದ್ದಿಗಾಗಿ ಹಲವರ ಜೊತೆಗೆ ಸಂಪರ್ಕದಲ್ಲಿರುವ ಕಾರಣ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರ ಮಾಹಿತಿ ನೀಡಿದವರನ್ನೇ ಬಂಧಿಸಿರುವುದು ಪೂರ್ವಗ್ರಹ ಪೀಡಿತ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಶುಕ್ರವಾರ ಸಂಜೆ ಅವರನ್ನು ಕೊಲೆ ಪ್ರಕರಣದ ಆರೋಪಿಗಳ ಜೊತೆಗೆ ದೂರವಾಣಿ ಸಂಪರ್ಕ ಹೊಂದಿದ್ದಾರೆ ಎಂದು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಇದು ಸರಿಯಾದ ಬೆಳವಣಿಗೆ ಅಲ್ಲ. ಪತ್ರಕರ್ತರನ್ನು ಬಂಧಿಸುವ ಮುನ್ನ ಸರ್ಕಾರ ಹಾಗೂ ಪೊಲೀಸ್ ಹತ್ತು ಬಾರಿ ವಿಚಾರಿಸಬೇಕು. ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಬಂಧಿಸಲು ಪೂರ್ವ ಅನುಮತಿ ಅಗತ್ಯವಿದೆ ಅದೇ ರೀತಿ ಪತ್ರಕರ್ತರ ಬಂಧನಕ್ಕೆ ಕೂಡ ಅನುಮತಿ ಪಡೆಯುವ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಕೂಡಲೇ ಅವರನ್ನು ಬಿಡುಗಡೆ ಗೊಳಿಸಬೇಕು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕ ಅಧ್ಯಕ್ಷ ಪವನ ನಾ ಕೊಡಹೊನ್ನ, ಪ್ರಧಾನ ಕಾರ್ಯದರ್ಶಿ ಶಿವರಾಜಕುಮಾರ ವಾಲಿಕಾರ, ಗೌರವಾಧ್ಯಕ್ಷ ಅಶೋಕ ನಾಯ್ಕೋಡಿ , ಸಿದ್ದು ಕುದುರೆ, ಮೊಹಮದ ನಾಸಿರ, ಸಂತೋಷ ಹೊಸಮನಿ, ಅರವಿಂದ ಕಾಂಬಳೆ ಉಪಸ್ಥಿತರಿದ್ದರು.