- ಕೃಷ್ಣಮೃಗಗಳು ವಾಸಿಸುವ ಪ್ರದೇಶ noಘೋಷಣೆಗೆ ಗಮನ ಸೆಳೆದ ಶಾಸಕ.
- ಜಂಟಿ ಸರ್ವೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವದು- ಅರಣ್ಯ ಇಲಾಖೆ.
ಇಂಡಿ : ಬಿಸಲುನಾಡು ಬರಡು ಭೂಮಿ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ತಾಲೂಕಿನ ಸಾವಳಸಂಗ ಗ್ರಾಮದ ಅರಣ್ಯ ಪ್ರದೇಶವನ್ನು ‘ರಕ್ಷಿತ ಅರಣ್ಯ ಪ್ರದೇಶವೆಂದು ಘೋಷಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸರ್ಕಾರಕ್ಕೆ ಆಗ್ರಹಿಸಿದರು.
ವಿಧಾನಸಭೆಯಲ್ಲಿ ನಿಯಮ- 73ರಡಿಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ್ “ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾವಳಸಂಗ ಗ್ರಾಮದ ವ್ಯಾಪ್ತಿಯಲ್ಲಿರುವ ಅರಣ್ಯ ಪ್ರದೇಶವನ್ನು ‘ರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸುವುದು. ಹಾಗೂ ಇಂಡಿ ಮತ್ತು ಚಡಚಣ ತಾಲೂಕಿನ ವ್ಯಾಪ್ತಿಯಲ್ಲಿ ಕೃಷ್ಣಮೃಗಗಳು ವಾಸಿಸುತ್ತಿರುವುದರಿಂದ ಸದರಿ ಪ್ರದೇಶವನ್ನು ‘ಕೃಷ್ಣಮೃಗಗಳ ಸಂರಕ್ಷಿತ ಪ್ರದೇಶವೆಂದು ಘೋಷಿಸುವ ಬಗ್ಗೆ ಪ್ರಸ್ತಾಪಿಸಿ ಸರಕಾರದ ಗಮನ ಸೆಳೆದರು.
ಇದಕ್ಕೆ ಅರಣ್ಯ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಜಿಲ್ಲೆಯ ಇಂಡಿ ತಾಲ್ಲೂಕಿನ ಸಾವಳಸಂಗ ಗ್ರಾಮದ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನು ಮುಫತ ಗಾಯಾರಾಣ ಸರ್ವೆ ನಂ.3, 32, 33, 221, 221, 213, 222, 292, 293, 302, 315 (ಪಿ), 315ಎ, 2991/1 ಈ ರೀತಿ ಒಟ್ಟು 230.50 ಎಕರೆ ಜಮೀನಿದ್ದು, ಸದರಿ ಜಮೀನಿನಲ್ಲಿ ವಿಜಯಪುರ ಸಾಮಾಜಿಕ ಅರಣ್ಯ ವಿಭಾಗದ ವತಿಯಿಂದ ಒಟ್ಟು 156.00 ಎಕರೆ ಪ್ರದೇಶದಲ್ಲಿ ಈಗಾಗಲೇ ಬೇವು, ಹೊಂಗೆ, ಆಲ, ಅರಳಿ, ನೇರಳ ಮುಂತಾದ ಜಾತಿಯ 19000 ಗಿಡಗಳನ್ನು ನೆಡಲಾಗಿದೆ.
ಸದರಿ ಪ್ರದೇಶಗಳನ್ನು ರಕ್ಷಿತ ಅರಣ್ಯವೆಂದು ಘೋಷಿಸಲು ಕಂದಾಯ ಇಲಾಖೆಯು ಕರ್ನಾಟಕ ಭೂಕಂದಾಯ ಕಾಯ್ದೆ 1964 ರ ಪ್ರಕರಣ 71 ರಡಿಯಲ್ಲಿ ಕಾಯ್ದಿರಿಸಿ
ಆದೇಶಿಸಬೇಕಾಗುತ್ತದೆ. ನಂತರ ಸ್ಥಳದ ಸೂಕ್ತತೆ ಪರಿಶೀಲಿಸಿ, ಜಂಟಿ ಸರ್ವೆ ನಡಸಿ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ. ಆದುದರಿಂದ, ಸದರಿ ಪ್ರದೇಶವನ್ನು ರಕ್ಷಿತ ಅರಣ್ಯವೆಂದು ಘೋಷಿಸುವ ಕುರಿತಂತೆ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಿಸಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ಹಾಗೂ ಚಡಚಣ ತಾಲೂಕಿನ ವ್ಯಾಪ್ತಿಯ ದೇವರನಿಂಬರಗಿ, ಧಮಕನಾಳ, ನಂದರಗಿ, ಶಿಗಣಾಪೂರ, ಜೇವೂರ ಮುಂತಾದ ಕಡೆಗಳಲ್ಲಿ ಸಾರ್ವಜನಿಕರ ಕಣೋಟಿನ ಅಂದಾಜು ಪ್ರಕಾರ 150 ರಿಂದ 200 ಕೃಷ್ಣಮೃಗಗಳು ಕಳೆದ ನಾಲ್ಕು ವರ್ಷಗಳಿಂದ ಕಂಡುಬರುತ್ತಿವೆ. ಸದರಿ ವನ್ಯಜೀವಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅನುಸಾರ ಶಡೂಲ್ -1ರಲ್ಲಿ ಬರುತ್ತವೆ. ಇವುಗಳು ಕಂಡುಬರುವ ಪ್ರದೇಶಗಳು ರೀತಿಯ ಅರಣ್ಯ ಪ್ರದೇಶವಾಗಿರದೇ ಖಾಸಗಿ ಜಮೀನು ಹಾಗೂ ಸರ್ಕಾರಿ ಮುಫತ್ ಗಾಯಾರಾಣಗಳಲ್ಲಿ ಕಂಡುಬರುತ್ತಿವೆ. ಆದ್ದರಿಂದ, ಈ ಪ್ರದೇಶಗಳನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರಡಿ ಸಂರಕ್ಷಿತ ಪ್ರದೇಶಗಳೆಂದು ಘೋಷಿಸಲು ಗ್ರಾಮಸ್ಥರ ಹಾಗೂ ಗ್ರಾ.ಪಂ.ಗಳೋಡನೆ ಸಮಾಲೋಚಿಸಿ ಕ್ರಮಕೈಗೊಳ್ಳಲಾಗುವದು ಎಂದಿದ್ದಾರೆ.