ಪ್ರತಿಭೆ ಹೊರಹಾಕಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ
ಇಂಡಿ: ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅರಳಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದ್ದು, ಮಕ್ಕಳು ಕೂಡ ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದು ಉರ್ದು ಶಿಕ್ಷಣ ಸಂಯೋಜಕರಾದ ನವಾಜ್ ಖಾನ್ ಪಠಾಣ ಹೇಳಿದರು.
ಅವರು ತಾಲೂಕಿನ ಇಂಗಳಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಇಂಗಳಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸರಕಾರ ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಈ ಮೂಲಕ ಮಕ್ಕಳು ತಮ್ಮಲ್ಲಿರುವ ಕಲೆ, ಸಾಹಿತ್ಯ, ಜಾನಪದ ಪ್ರಕಾರದ ಪ್ರತಿಭೆಯನ್ನು ತೋರಿ ಸಾಂಸ್ಕೃತಿಕವಾಗಿ ಮುಂದೆ ಬರಬೇಕು ಎಂದರು.
ಬಸವರಾಜ ಗೋರನಾಳ ಮಾತನಾಡಿ, ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಸಾಂಸ್ಕೃತಿಕ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಅನಾವರಣ ಮಾಡುವ ಮೂಲಕ ಮಕ್ಕಳು ಸರ್ವಾಂಗೀಣ ಬೆಳವಣಿಗೆ ಸಾಧಿಸಲು ಅವಕಾಶ ಕಲ್ಪಿಸಬೇಕು ಎಂದರು.
ಸಿ ಆರ್ ಪಿ ಭಾಷಾ ಕುಮಸಗಿ, ಇಂಡಿ ಸಿ ಆರ್ ಪಿ ಪರ್ವೇಜ್ ಪಟೇಲ್, ಹಿರೇರೂಗಿ ಸಿ ಆರ್ ಪಿ ಬಿ ಡಿ ಚಪ್ಪರಬಂದ, ಸಿ ಆರ್ ಪಿ ಸಿಕ್ಕಲಗಾರ, ಮುಖ್ಯ ಶಿಕ್ಷಕ ಕಾಸಿಂ ಮಕಾನದಾರ, ಎಂ ಆಯ್ ಪಟೇಲ್ ಹಾಗೂ ಶಿಕ್ಷಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.