ಇಂಡಿ : ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ದೇಶವಾಗಿದೆ’ ಎಂದು ತಾಲೂಕು ಕ್ಷೇತ್ರ ಶಿಕ್ಷಣ ಇಲಾಖೆ ಇಸಿಒ ಎ.ಸಿ. ಹುಣಸಿಗಿ ಹೇಳಿದರು.
ಪಟ್ಟಣದ ಪ್ರತಿಷ್ಠಿತ ಎಕ್ಸೆಲೆಂಟ್ ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆಯಲ್ಲಿ ಆವರಣದಲ್ಲಿ ನಡೆದ ಕ್ಲಸ್ಟರ್ -2 ರ ಪ್ರತಿಭಾ ಕಾರಂಜಿ ಕಾರ್ಯಕ್ರಮ ಮತ್ತು 2024 ನೇ ಸಾಲಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸ್ಥಳೀಯ ಜನಪದ ನೃತ್ಯ ಮತ್ತು ಗಾಯನ, ಚಿತ್ರಕಲೆ, ಪ್ರಬಂಧ, ಚರ್ಚಾಸ್ಪರ್ಧೆ, ಏಕಾಪಾತ್ರಾಭಿನಯ, ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳು ಅನೇಕ ಕಲಾತ್ಮಕ ಸಾಂಸ್ಕೃತಿಕ ಚಟುವಟಿಕೆಗಳು ಪ್ರತಿಭಾ ಕಾರಂಜಿ ವ್ಯಾಪ್ತಿಯಲ್ಲಿ ಬರುವುದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ಕಲಾಭಿರುಚಿಯ ಸಾಮರ್ಥ್ಯವನ್ನು ಸಾಬೀತು ಮಾಡಲು ಇದೊಂದು ಉತ್ತಮ ವೇದಿಕೆ’ ಎಂದು ಹೇಳಿದರು.
ಪ್ರತಿಭಾ ಕಾರಂಜಿ ಎಂಬುದು ಕಲಾ ಪ್ರತಿಭೆಗಳ ಚಿಣ್ಣರ ಹಬ್ಬ, ಪೋಷಕರಿಗಲ್ಲದೆ ಸಾರ್ವಜನಿಕರು ಖುಷಿ ಪಡುವ ಹಬ್ಬ. ಮಕ್ಕಳ ಪ್ರತಿಭೆಯನ್ನು ತಂದೆ ತಾಯಿಗಳು ಹತ್ತಿರದಿಂದ ಕಣ್ಮುಂಬಿಕೊಳ್ಳುವ ವೇದಿಕೆಯಾಗಿದೆ. ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದವರೆಗೆ ಸ್ಪರ್ಧೆ ಇರುವುದರಿಂದ ಶಾಲೆ ಶಿಕ್ಷಕರು ಉತ್ತಮ ತರಬೇತಿ ನೀಡಿ ಸಜ್ಜುಗೊಳಿಸಬೇಕು. ಸರ್ಕಾರ ಮಕ್ಕಳ ಹಿತದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿ ಮಾಡಿ ಗುಣಮಟ್ಟದ ಶಿಕ್ಷಣಕ್ಕೆ ಪ್ರಯತ್ನಿಸುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿ ಆರ್ ಪಿ ಶ್ರೀಧರ್ ಹಿಪ್ಪರಗಿ, ‘15 ವರ್ಷಗಳಿಂದ ಸರ್ಕಾರವು ಶಿಕ್ಷಣ ಇಲಾಖೆ ಮೂಲಕ ಸರ್ಕಾರಿ ಖಾಸಗಿ ಶಾಲೆಗಳ ಒಂದರಿಂದ 10ನೇ ತರಗತಿ ಮಕ್ಕಳಿಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಮೂಲಕ ಅವರ ಪ್ರತಿಭೆ ಗುರುತಿಸುತ್ತಿದೆ. ಇದರ ಮೂಲಕ ಗ್ರಾಮೀಣ ಸೊಗಡಿನ ಸಾಂಸ್ಕೃತಿಕ ವೈಭವವನ್ನು ಇನ್ನಷ್ಟು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತಿದೆ. ಮನೋರಂಜನಾತ್ಮಕ ಕಾರ್ಯಕ್ರಮದಿಂದ ಶೈಕ್ಷಣಿಕ ಗುಣಮಟ್ಟದ ಫಲಿತಾಂಶಕ್ಕೂ ಸಹಕಾರಿಯಾಗಲಿದೆ’ ಎಂದು ಹೇಳಿದರು.
ಇನ್ನೂ ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಎಸ್ ಎಸ್ ಪ್ಯಾರಾ ಮೆಡಿಕಲ್ ಕಾಲೇಜು ಸಂಸ್ಥಾಪಕ ಅಧ್ಯಕ ಎಸ್ ಬಿ ಕೆಂಬೋಗಿ ಮಾತನಾಡಿದ ಅವರು, ಕೇವಲ ನಾಲ್ಕು ಗೊಡೆಯ ವರ್ಗ ಕೋಣೆಯಲ್ಲಿ ಶಿಕ್ಷಣ ಕೊಡುವುದಕ್ಕಿಂತ, ಸಾರ್ವಜನಿಕ ವೇದಿಕೆ ಕಲ್ಪಿಸಿ , ಸ್ಪರ್ಧಾತ್ಮಕ ಯುಗದಲ್ಲಿ ಸಾರ್ವಜನಿಕ ಬದುಕಿನ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ವಿಧ್ಯಾರ್ಥಿಗಳ ಪಾತ್ರದ ಬಗ್ಗೆ ತಿಳಿಹೇಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಪ್ರಕಾಶ ರಾಠೋಡ, ಬಿ ಆರ್ ಪಿ ಎಸ್ ಕೆ ಕೋಲಾರ, ಪತ್ರಕರ್ತ ಶಂಕರಲಿಂಗ ಜಮಾದಾರ, ಮುರಾರ್ಜಿ ವಸತಿ ಶಾಲೆಯ ಶಿಕ್ಷಕ ಆನಂದ ಕಟವಾಣಿ, ಶ್ರೀಶೈಲ್ ಹೂಗಾರ ಇನ್ನೂ ವಿವಿಧ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು. ಸಾಹಿತಿ ಹಾಗೂ ದೈಹಿಕ ಶಿಕ್ಷಕ ಧಶರಥ ಕೋರಿ ಸ್ವಾಗತಿಸಿದರು.
ಶೋಭಾ ಸಾರವಾಡ ನಿರೂಪಿಸಿ ವಂದಿಸಿದರು.