ರಾಯಚೂರು : ಹಿಜಾಬ್ ಧರಿಸಿ ಶಾಲಾ, ಕಾಲೇಜುಗಳಿಗೆ ಬಂದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡದಿರುವ ಪ್ರಾಂಶುಪಾಲರು ಹಾಗೂ ಡಿಡಿಪಿಐ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಫೆ.೧೦ ರಂದು ಉಚ್ಛ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದ್ದು, ಈ ಆದೇಶದಲ್ಲಿ ಸಿಬಿಸಿ ಕಾಲೇಜು ಡೆವಲಪ್ಮೆಂಟ್ ಕಮಿಟಿ, ಪದವಿ ಪೂರ್ವ ಕಾಲೇಜಿಗೆ ಸೂಚನೆ ನೀಡಲಾಗಿದೆ. ಇದರಲ್ಲಿ ಶಾಲಾ ಮತ್ತು ಪದವಿ ಕಾಲೇಜುಗಳಿಗೆ ಯಾವುದೇ ರೀತಿಯ ನಿರ್ದೇಶನಗಳನ್ನು ನೀಡಿಲ್ಲ. ಆದರೆ, ಉಚ್ಛ ನ್ಯಾಯಾಲಯ ಆದೇಶವನ್ನು ದುರುಪಯೋಗಿಸಿ, ನಗರದಲ್ಲಿ ಉರ್ದು ಶಾಲೆಗಳಲ್ಲಿ ಮತ್ತು ಪದವಿ ಕಾಲೇಜುಗಳಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ನಿರ್ಬಂಧಿಸಿರುವುದು ಖಂಡನೀಯ.
ಫೆ.೨೧ ರಿಂದ ಎಸ್‌ಎಸ್‌ಎಲ್‌ಸಿ ಪ್ರಿಪಿರೆಟರಿ ಪರೀಕ್ಷೆಗಳು ಇದ್ದು, ಆದರೆ, ಈ ಆದೇಶ ಒತ್ತಡವೇರಿರುವ ಕಾರಣ ವಿದ್ಯಾರ್ಥಿಗಳು ಹಿಜಾಬ್ ಧರಿಸದೇ ಶಾಲಾ, ಕಾಲೇಜುಗಳಿಗೆ ಹಾಜರಾಗಲು ನಿರಾಕರಿಸುತ್ತಿದ್ದಾರೆ. ನಗರದ ಎಸ್‌ಎಸ್‌ಆರ್‌ಜಿ ಪದವಿ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ನಿರ್ಬಂಧಿಸಿದ್ದಾರೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ಹಿತದೃಷ್ಟಿಯಿಂದ ಉಚ್ಛ ನ್ಯಾಯಾಲಯ ಮಧ್ಯಂತರ ಆದೇಶ ಸರಿಯಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.