ವಿಜಯಪುರ : ಬಬಲೇಶ್ವರ ಕ್ಷೇತ್ರದ ರಾಜಕೀಯ ಕುತಂತ್ರದಿಂದ ನನಗೆ ಸೋಲಾಗಿದೆ. ನಾನು ಹಣ ಗಳಿಸಿಲ್ಲ. ಜನರ ಹೃದಯ ಗೆದ್ದಿದ್ದೇನೆ ಎಂದು ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ ಹೇಳಿದರು.
ವಿಜಯಪುರ ನಗರದಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹೇಡಿ ರಾಜಕಾರಣ ಮಾಡುವ ಕೆಲಸ ಮತ್ತೆ ಈಗಿನಿಂದಲೇ ಆರಂಭಗೊಂಡಿದೆ ಎಂದು ಪರೋಕ್ಷವಾಗಿ ಶಾಸಕ ಎಂ.ಬಿ.ಪಾಟೀಲ ವಿರುದ್ಧ ಕಿಡಿಕಾರಿದರು. ಬಬಲೇಶ್ವರ ಕ್ಷೇತ್ರದಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ಹಮ್ಮಿಕೊಂಡಿರುವ ಕಾಂಗ್ರೆಸ್ ಸೀರೆ, ಮೊಬೈಲ್ ಹಂಚುವ ಆಮಿಷದ ಅಕ್ರಮ ಮಾರ್ಗ ಅನುಸರಿಸುತ್ತಿದೆ ಎಂದು ದೂರಿದರು. ಸೋಲುವ ಭೀತಿಯಿಂದ ಆಧುನಿಕ ಭಗೀರತ ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮಹಿಳೆಯರಿಗೆ ಸೀರೆ ಹಾಗೂ ಮೊಬೈಲ್ ವಿತರಣೆ ಮಾಡುತ್ತಿದ್ದಾರೆ. ಆದರೂ ಬಬಲೇಶ್ವರ ಕ್ಷೇತ್ರದ ಜನರು ಇವರ ಸಣ್ಣತನದ ಆಮಿಷಕ್ಕೆ ಬಲಿಯಾಗುವುದಿಲ್ಲ ಎಂದರು.