ಅಂಗನವಾಡಿ ಕಾರ್ಯಕರ್ತೆಯಿರಿಬ್ಬರ ಬಡದಾಟ..! ಎಲ್ಲಿ ಗೊತ್ತಾ..?
ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಅಂಗನವಾಡಿ ಕಾರ್ಯಕರ್ತೆಯರಿಬ್ಬರು ತಮ್ಮದೇ ಅಂಗನವಾಡಿ ಕೇಂದ್ರದಲ್ಲಿ ಪರಸ್ಪರ ಬಡಿದಾಡಿಕೊಂಡಿದ್ದು ಈ ಪೈಕಿ ಓರ್ವಳಿಗೆ ತೊಂದರೆಯಾಗಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದ ಪಿಲೇಕೆಮ್ಮನಗರದ ಅಂಗನವಾಡಿ-೧ರಲ್ಲಿ ಶುಕ್ರವಾರ ನಡೆದಿದೆ.
ಶಾಂತಾ ಮಾಮನಿ, ರೇಣುಕಾ ರಾಮಕೋಟಿ ಪರಸ್ಪರ ಬಡಿದಾಡಿಕೊಂಡಿರುವ ಕಾರ್ಯಕರ್ತೆಯರಾಗಿದ್ದಾರೆ. ಮೊದಲು ಅದೇ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿದ್ದ ಶಾಂತಾ ಅವರನ್ನು ಸಾರ್ವಜನಿಕರ ದೂರು ಮತ್ತು ಆಡಳಿತದ ಹಿತದೃಷ್ಟಿಯಿಂದ ಸಿಡಿಪಿಓ ವರದಿ ಆಧರಿಸಿ ಸಂಗಮೇಶ್ವರ ನಗರದ ೧ನೇ ಅಂಗನವಾಡಿ ಕೇಂದ್ರಕ್ಕೆ ಸ್ಥಾನಪಲ್ಲಟ ಮಾಡಿ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆಯ ವಿಜಯಪುರ ಕಚೇರಿಯ ಉಪನಿರ್ದೇಶಕರು ಆದೇಶ ಹೊರಡಿಸಿದ್ದರು. ಇವರ ಸ್ಥಾನಕ್ಕೆ ರೇಣುಕಾ ಅವರನ್ನು ಪ್ರಭಾರಿಯಾಗಿ ನಿಯೋಜಿಸಲಾಗಿತ್ತು. ರೇಣುಕಾ ಅವರನ್ನು ಕೇಂದ್ರದ ಮೇಲ್ವಿಚಾರಕರು ಗುರುವಾರ ಕರ್ತವ್ಯಕ್ಕೆ ಹಾಜರು ಮಾಡಿಸಿದ್ದರು. ಶುಕ್ರವಾರ ಬೆಳಿಗ್ಗೆ ಕೇಂದ್ರಕ್ಕೆ ಬಂದಿದ್ದ ಶಾಂತಾ ಮತ್ತು ರೇಣುಕಾ ನಡುವೆ ಮಕ್ಕಳ ಎದುರೇ ಪರಸ್ಪರ ಅವಾಚ್ಯ ಶಬ್ಧಗಳ ನಿಂದನೆ ಆಗಿದೆ. ನಂತರ ಏಕಾಏಕಿ ಇಬ್ಬರೂ ಕೈ ಮಿಲಾಯಿಸಿ ಬಡಿದಾಡಿಕೊಂಡಿದ್ದಾರೆ.
ಈ ಗದ್ದಲ ಕೇಳಿದ ಅಕ್ಕಪಕ್ಕದವರು ಕೇಂದ್ರಕ್ಕೆ ಬಂದು ಜಗಳ ಬಿಡಿಸಿ ಬುದ್ದಿವಾದ ಹೇಳಿದ್ದಾರೆ. ಅಷ್ಟರಲ್ಲಿ ರೇಣುಕಾ ಪ್ರಜ್ಞೆ ತಪ್ಪಿ ಬಿದ್ದಿದ್ದರಿಂದ ಆಸ್ಪತ್ರೆಗೆ ಸಾಗಿಸಿದ್ದಾರೆ. ವಿಷಯ ತಿಳಿದು ಪೊಲೀಸರು ಆಸ್ಪತ್ರೆಗೆ ತೆರಳಿ ರೇಣುಕಾಳಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ಇವರಿಬ್ಬರ ಮಧ್ಯೆ ಮೊದಲಿನಿಂದಲೂ ಹಗೆತನ ಇದ್ದದ್ದು ಈ ಜಗಳಕ್ಕೆ ಕಾರಣ ಎಂದು ಕೇಂದ್ರದ ಅಕ್ಕಪಕ್ಕದ ನಿವಾಸಿಗಳು ತಿಳಿಸಿದ್ದಾರೆ. ಈ ಕುರಿತು ಸಿಡಿಪಿಓ ಶಿವಮೂರ್ತಿ ಕುಂಬಾರ ಅವರು ಮಾತನಾಡಿ ಘಟನೆ ಗಮನಕ್ಕೆ ತಂದಿದೆ. ಕಚೇರಿ ಕೆಲಸದ ನಿಮಿತ್ಯ ಕಲಬುರ್ಗಿ ಹೈಕೋರ್ಟ ಪೀಠಕ್ಕೆ ಹೋಗಿ ಬರುತ್ತಿದ್ದೇನೆ. ನಾಳೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಇಬ್ಬರೂ ಜಗಳ ಮಾಡಿರುವ ಕುರಿತು ಮೇಲಧಿಕಾರಿಗಳಿಗೆ ಮೌಖಿಕ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದರು.
ಮುದ್ದೇಬಿಹಾಳ: ಅಂಗನವಾಡಿ ಕಾರ್ಯಕರ್ತೆಯರಾದ ಶಾಂತಾ ಮಾಮನಿ, ರೇಣುಕಾ ರಾಮಕೋಟಿ ಅವರು ಅಂಗನವಾಡಿ ಕೇಂದ್ರದಲ್ಲೇ ಪರಸ್ಪರ ಬಡಿದಾಡಿಕೊಳ್ಳುತ್ತಿರುವ ದೃಶ್ಯ.